ಕೇವಲ ಆಶ್ವಾಸನೆ ನೀಡುವ ಸಂಸದ ನಾನಲ್ಲ
ರಾಮನಗರ: ಕೇವಲ ಆಶ್ವಾಸನೆಗಳನ್ನು ನೀಡಿಕೊಂಡು ಕಾಲಹರಣ ಮಾಡುವ ಸಂಸದ ನಾನಲ್ಲ. ಉಪ ಚುನಾವಣೆಗೆ ಮೊದಲೇ ನೀಡಿದ್ದ ವಾಗ್ದಾನದಂತೆ ಜನರ ಮಧ್ಯೆ ಇದ್ದು ಸೇವೆ ಮಾಡುವ ಸೇವಕನಾಗಿದ್ದೇನೆ ಎಂದು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.
ಮಂಚನಬಲೆಯಿಂದ ರಾಮನಗರದವರೆಗೆ ನಡೆದ ಭಾರತ ನಿರ್ಮಾಣ ಯಾತ್ರೆಯಲ್ಲಿ ಪಾಲ್ಗೊಂಡ ಅವರು ನಗರದ ರೇಲ್ವೆ ನಿಲ್ದಾಣ ವೃತ್ತದ ಬಳಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಅಲ್ಪಾವಧಿಯಲ್ಲಿ ಕ್ಷೇತ್ರಾದ್ಯಂತ ಸಂಚರಿಸಿ ಸಮಸ್ಯೆಗಳನ್ನರಿತು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದರು.
ಈ ಭಾಗದಲ್ಲಿ ಕುಡಿಯುವ ನೀರಿಗೂ ಹೋರಾಟ ಮಾಡುವ ದುಃಸ್ಥಿತಿ ಎದುರಾಗಿದೆ. ಅದನ್ನು ಮನಗಂಡು ಕ್ಷೇತ್ರಾದ್ಯಂತ ನೂರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಗುರಿ ಹೊಂದಿದ್ದು, 16 ಘಟಕಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮದೇ ಕೊಡುಗೆ: ಹೇಮಾವತಿಯಿಂದ ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ಕೆರೆ ತುಂಬಿಸುವ ಶ್ರೀರಂಗ ಯೋಜನೆ ಮಂಜೂರು, ಎಕ್ಸ್ಪ್ರೆಸ್ ನಿಲುಗಡೆ ನಮ್ಮದೇ ಕೊಡುಗೆ. ರಾಮನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುರೇಶ್ ವಿವರಿಸಿದರು.
ವರಿಷ್ಠರು ಈ ಬಾರಿಯೂ ನನ್ನ ಮೇಲೆ ವಿಶ್ವಾಸವಿಟ್ಟು, ಆಯ್ಕೆ ಮಾಡಿದ್ದಾರೆ. ಮತದಾರರು ಮತ್ತೊಮ್ಮೆ ಆಶೀರ್ವದಿಸಿದರೆ ಮುಂದಿನ 5 ವರ್ಷದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುವೆ ಎಂದು ಅವರು ಭರವಸೆ ನೀಡಿದರು.
ನಿರ್ಮಾಣ್ ಯಾತ್ರೆ: ಮಾಗಡಿ ತಾಲೂಕಿನ ಮಂಚನಬೆಲೆಯಿಂದ ಬೆಳಿಗ್ಗೆ ಹೊರಟ ಭಾರತ್ ನಿರ್ಮಾಣ್ ಯಾತ್ರೆಯು ಸಂಜೆ ವೇಳೆಗೆ ರಾಮನಗರಕ್ಕೆ ತಲುಪಿತು. ಎಲ್ಲೆಡೆ ಕಾರ್ಯಕರ್ತರು ಸ್ವಾಗತ ಕೋರುವ ಫ್ಲೆಕ್ಸ್, ಬಂಟಿಂಗ್ಸ್, ತಳಿರು, ತೋರಣ ಕಟ್ಟಿ, ಪಟಾಕಿ ಸಿಡಿಸಿದರು.
ಅಳವಡಿಸಿದ್ದ ಪ್ರಚಾರ ಸಾಮಗ್ರಿಗಳಿಗೆ ಅನುಮತಿ ಪಡೆದಿರಲಿಲ್ಲ. ಹತ್ತಾರು ವಾಹನಗಳು ಯಾತ್ರೆಯೊಂದಿಗೆ ಪಾಲ್ಗೊಂಡಿದ್ದವು. ಈ ಕುರಿತು ಕೆಜೆಪಿಯಿಂದ ದೂರು ಸಲ್ಲಿಕೆಯಾದರೂ ಅಧಿಕಾರಿಗಳೂ ಗಪ್ ಚುಪ್ ಆಗಿದ್ದರು.
ಪಾಲ್ಗೊಂಡ ಪ್ರಮುಖರು: ಯಾತ್ರೆಗೆ ಚಾಲನೆ ನೀಡಬೇಕಿದ್ದ ಸಚಿವ ಡಿ.ಕೆ.ಶಿವಕುಮಾರ್ ಗೈರಾದರು. ಸಂಸದ ಸುರೇಶ್ ಯಾತ್ರೆ ಅರ್ಧದಾರಿ ಸಾಗಿದ ನಂತರ ಕೂಡಿಕೊಂಡರು. ಅಂಚೆಕೆಂಪಯ್ಯನದೊಡ್ಡಿ, ಹಾಗಲಹಳ್ಳಿ, ಸುಗ್ಗನಹಳ್ಳಿ, ಕೆಂಪೇಗೌಡನದೊಡ್ಡಿ ಮಾರ್ಗವಾಗಿ ಯಾತ್ರೆ ರಾಮನಗರ ತಲುಪಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿಯಾವುಲ್ಲಾ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮುಖಂಡರಾದ ಮರಿದೇವರು, ಎ.ಮಂಜು, ರಮೇಶ್, ಚಂದ್ರಶೇಖರ್, ಜಯರಾಮಯ್ಯ, ಆರಿಫ್ಖ್ ಖುರೇಷಿ, ಕಾಂತರಾಜ್ ಪಟೇಲ್, ಕೆ.ಶೇಷಾದ್ರಿ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡರು.