ನೂತನ ಅಧ್ಯಕ್ಷ ಕೆಂಪೇಗೌಡ ಅವಿರೋಧ ಆಯ್ಕೆ
ಕನಕಪುರ: ಕನಕಪುರ ತಾಲೂಕು ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅಗರ ಗ್ರಾಮದ ಪಿ.ಸಿ. ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾದ ಜೆ. ನಟರಾಜ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇತರರು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಗಳಾಗಿ ಸಿದ್ಧಗಂಗಪ್ಪ ಹಾಗೂ ನಾಗೇಂದ್ರ ಕಾರ್ಯನಿರ್ವಹಿಸಿದರು.
ನೂತನ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರನ್ನು ವಿಪ ಮಾಜಿ ಸದಸ್ಯ ಎಸ್.ರವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಡಿ. ವಿಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿಲೀಪ್, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್, ಕುಮಾರ್, ಬಸಪ್ಪ, ಸಬ್ದರ್ ಹುಸೇನ್, ಜಿಪಂ ಸದಸ್ಯೆ ಗೀತಾ ಈಶ್ವರ್, ತಮ್ಮಣ್ಣಗೌಡ, ಬಿ.ಸಿ.ಮರಿಯಪ್ಪ, ಸಿದ್ದರಾಜು, ನಾಗೇಶ್ ಅಭಿನಂದಿಸಿದರು.
ವಿಪ ಮಾಜಿ ಸದಸ್ಯ ಎಸ್. ರವಿ ಮಾತನಾಡಿ, ಹಲವಾರು ದಶಕಗಳಿಂದ ರೈತರಿಗೆ ಉತ್ತಮ ಸೇವೆ ನೀಡುತ್ತಿದ್ದ ಪಿಎಲ್‌ಡಿ ಬ್ಯಾಂಕ್ ಈಗ ನಷ್ಟ ಅನುಭವಿಸುತ್ತಿರುವುದು ವಿಷಾದನೀಯ. ರೈತರು ಸಕಾಲಿಕವಾಗಿ ಮರುಪಾವತಿ ಮಾಡಿದ್ದರೆ ಇಂತ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಸರ್ಕಾರದ ಸಹಾಯಧನವೂ ಸಕಾಲಕ್ಕೆ ಲಭ್ಯವಾಗಿಲ್ಲ, ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಹೇಳಿದರು.