ನಗರಸಭೆ ಗಾದಿಗೆ ಇಂದೇ ಮುಹೂರ್ತ
ದೊಡ್ಡಬಳ್ಳಾಪುರ: ನಗರಸಭೆಯ ಬಹುನಿರೀಕ್ಷಿತ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಪೀಠಾರೋಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ನಡೆದು ಬರೋಬ್ಬರಿ 1 ವರ್ಷದ ನಂತರ ಆಡಳಿತದ ಚುಕ್ಕಾಣಿ ಜನಪ್ರತಿನಿಧಿಗಳ ಕೈಗೆ ಸಿಗುತ್ತಿದೆ. ಅದರಲ್ಲೂ ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಪದವಿಗಳೆರಡೂ ಮಹಿಳೆಯರಿಗೇ ಮೀಸಲಾಗಿರುವುದು ವಿಶೇಷ.
ಅಧ್ಯಕ್ಷ ಗಾದಿಯ ವಾರಸುದಾರಿಕೆಯನ್ನು ಹಿಡಿತದಲ್ಲಿಡಲು ಈಗಾಗಲೇ ಜೆಡಿಎಸ್ ಸಜ್ಜಾಗಿ ನಿಂತಿದೆ. ಸೈದ್ಧಾಂತಿಕವಾಗಿ ಅಲ್ಲದಿದ್ದರೂ ಸಂದರ್ಭದ ಅವಕಾಶವನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್-ಕನ್ನಡಪಕ್ಷ ಪರಸ್ಪರ ಒಪ್ಪಂದಕ್ಕೆ ಬಂದಿವೆ. ಜನ ಕೊಟ್ಟ ತೀರ್ಪಿನ ಆಧಾರದಲ್ಲೇ ಹೆಚ್ಚಿನ ಸೀಟು ಹೊಂದಿರುವ ಜೆಡಿಎಸ್ ಅಧಿಕಾರ ಬಳಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದು ಇದಕ್ಕಾಗಿ ಕನ್ನಡಪಕ್ಷದ ಇಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರ ಬೆಂಬಲ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಹೀಗಾಗಿ 31 ಸದಸ್ಯ ಬಲದ ನಗರಸಭೆಯಲ್ಲಿ ಬಹುಮತಕ್ಕೆ ಬೇಕಾದ 17 ಸದಸ್ಯ ಬಲವನ್ನು ಈಗ ಜೆಡಿಎಸ್ ಮೈತ್ರಿಕೂಟ (ಜೆಡಿಎಸ್ 14, ಕನ್ನಡಪಕ್ಷ 2 ಮತ್ತು ಪಕ್ಷೇತರ 1) ಹೊಂದಿದೆ. ಈ ಮೈತ್ರಿಕೂಟದ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವುದು ಸುಲಭವೂ ಅಲ್ಲ. ಆ ಬಗೆಯ ಪ್ರಕ್ರಿಯೆಗಳೂ ನಡೆದಿಲ್ಲ ಎಂಬುದು ಬಲ್ಲ ಮೂಲಗಳ ಮಾಹಿತಿ.
ಸಾಹಸಕ್ಕೆ ಕೈ ಹಾಕದ ಕಾಂಗ್ರೆಸ್: ಇನ್ನು ಕಾಂಗ್ರೆಸ್ ಶಾಸಕರು ಮತ್ತು ಸಂಸದರಿರುವ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಗರಸಭೆಯಲ್ಲಿ ಯಾವುದೇ ಸಾಹಸಕ್ಕೆ ಕೈ ಹಾಕಲು ಮುಂದಾಗಿಲ್ಲ. ಕೇವಲ 4 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ನಲ್ಲೂ ಅಧ್ಯಕ್ಷಗಾದಿಗೆ ಅರ್ಹ ಅಭ್ಯರ್ಥಿ ಇದ್ದಾರೆ. ಆದರೆ ಬಿಜೆಪಿ ಮತ್ತು ಇತರ ಪಕ್ಷೇತರರೊಂದಿಗೆ ವಿಶ್ವಾಸ ಸಾಧಿಸಿ ಸರಳ ಬಹುಮತಕ್ಕೆ ಪ್ರಯತ್ನಿಸುವುದು ಕಷ್ಟ ಸಾಧ್ಯ. ಜೊತೆಗೆ ಬಿಜೆಪಿ ಕೂಡ 6 ಸ್ಥಾನ ಮಾತ್ರ ಗಳಿಸಿದ್ದು ಅಧಿಕಾರದ ಆಸೆಯನ್ನು ಕೈ ಚೆಲ್ಲಿದೆ.
ಸವಾಲಿನ ಮೇಲೆ ಸವಾರಿ: ಅಧಿಕಾರಕ್ಕೆ ಯಾರೇ ಬರಲಿ, ಅದು ಹೂವಿನ ಹಾಸಿಗೆಯಂತೂ ಅಲ್ಲ. ಕಳೆದ 6 ವರ್ಷಗಳಲ್ಲಿ ಅಸ್ಥಿರವಾಗಿರುವ ನಗರಸಭೆ ಆಡಳಿತ, ಸೃಷ್ಟಿಯಾಗಿರುವ ಅರಾಜಕತೆ, ಊರ ತುಂಬ ಕೇಳಿ ಬರುತ್ತಿರುವ ಹತ್ತಾರು ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ, ಅಕ್ರಮಗಳ ಸಾಲು ಸಾಲು ಆರೋಪಗಳು, ಖಾತೆಗಳ ಅಕ್ರಮ, ಲಂಚಗುಳಿತನದಿಂದ ತುಂಬಿ ದಲ್ಲಾಳಿಗಳ ಸ್ವರ್ಗವಾಗಿ ಮಾರ್ಪಟ್ಟಿರುವ ನಗರಸಭೆ ಅಡಿಯಿಂದ ಮುಡಿಯವರೆಗೆ ಬದಲಾಗಬೇಕಿದೆ. ಕಶ್ಮಲಗೊಂಡಿರುವ ನಗರಸಭೆಯ ಆಂತರಿಕ ವಾತಾವರಣವನ್ನು ಶುಚಿಗೊಳಿಸಬೇಕಾದ್ದು ಹೊಸದಾಗಿ ಅಧಿಕಾರಕ್ಕೆ ಬರುವ ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಇರುವ ಮೊದಲ ಜವಾಬ್ದಾರಿ ಎನಿಸಿದೆ.
ಯಾರಿಗೆ ಗದ್ದುಗೆ: ನಗರಸಭೆಯ ಅಧ್ಯಕ್ಷಗಾಗಿ ಜೆಡಿಎಸ್‌ನ ಸದಸ್ಯೆ ಯಶೋಧಮ್ಮ ಅಥವಾ ಶಂಶುನ್ನೀಸಾ ಅವರಲ್ಲಿ ಒಬ್ಬರ ಪಾಲಾಗಲಿದೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನ ಕನ್ನಡಪಕ್ಷದ ಮಂಜುಳಾ ಅಥವಾ ಸೌಭಾಗ್ಯಮ್ಮ ಅವರಲ್ಲಿ ಒಬ್ಬರಿಗೆ ಲಭಿಸಲಿದೆ. ಏನೇ ಪ್ರಕ್ರಿಯೆಗಳು ನಡೆದಿದ್ದರೂ ಅಧಿಕೃತವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಗುರುವಾರ ಮಧ್ಯಾಹ್ನದ ನಂತರವಷ್ಟೇ ಘೋಷಣೆಯಾಗಲಿದೆ.
-ಕೆ.ಆರ್.ರವಿಕಿರಣ್