ಬೆಂ.ಗ್ರಾ; ಶುರುವಾದ ಪಕ್ಷಾಂತರ
ರಾಮನಗರ: ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಪಕ್ಷಾಂತರ ಬಿರುಸುಗೊಂಡಿದೆ. ಸಿ.ಪಿ.ಯೋಗೇಶ್ವರ್ ಮರಳಿ ಕಾಂಗ್ರೆಸ್ ಗೂಡು ಸೇರಿದರೆ, ಮಾಜಿ ಸಂಸದೆ ತೇಜಸ್ವಿನಿ ಗೌಡ 'ಕಮಲ' ಹಿಡಿದಿದ್ದಾರೆ. ಮತ್ತೊಂದು ಪಕ್ಷಾಂತರಕ್ಕೆ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಕೂಡ ಅಣಿಯಾಗಿದ್ದಾರೆ.
ಘಟಾನುಘಟಿ ರಾಜಕಾರಣಿಗಳ ಸ್ಪರ್ಧೆ ಮತ್ತು ಅಚ್ಚರಿ ಫಲಿತಾಂಶಗಳ ಮೂಲಕ ಗಮನ ಸೆಳೆಯುತ್ತಲೇ ಬಂದಿರುವ ಈ ಕ್ಷೇತ್ರದಲ್ಲಿ ರಾಜಕೀಯ ಸ್ಥಿತ್ಯಂತರ ನಿರಂತರವಾಗಿದೆ. ಈ ಬಾರಿ ಚುನಾವಣೆ ಹೊಸ್ತಿಲಲ್ಲಿ ಯೋಗೇಶ್ವರ್, ತೇಜಸ್ವಿನಿ ಗೌಡ ಪಕ್ಷಾಂತರ ಮತ್ತು ಸಿಂಧ್ಯಾ ಸಿದ್ಧತೆಯಲ್ಲಿರುವ ಬೆಳವಣಿಗೆ ನಿರೀಕ್ಷಿತವೇ ಆಗಿದೆ.
ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಘೋಷಿಸಿದೆ. ಜೆಡಿಎಸ್ನಿಂದ ಪ್ರಭಾಕರರೆಡ್ಡಿ ಮತ್ತು ಬಿಜೆಪಿಯಿಂದ ಪಿ.ಮುನಿರಾಜು ಅಭ್ಯರ್ಥಿಗಳು. ಇಬ್ಬರೂ ಹೊಸ ಮುಖಗಳು. ಅಖಾಡದಲ್ಲಿ ಜಗಜಟ್ಟಿಗಳಿಲ್ಲ. ಆದರೂ ಪಕ್ಷಾಂತರ ಪರ್ವ ದೊಡ್ಡ ಮಟ್ಟದಲ್ಲೇ ಪ್ರಾರಂಭವಾಗಿದೆ. ತೇಜಸ್ವಿನಿ ಗೌಡ ಸಕ್ರಿಯ ರಾಜಕಾರಣ ಪ್ರವೇಶದ ಬಳಿಕ ಮಾಡಿದ ಮೊದಲ ಪಕ್ಷಾಂತರ ಇದಾಗಿದೆ. ಆದರೆ, ಮಾಜಿ ಸಚಿವ ಯೋಗೇಶ್ವರ್ ಅವರಿಗೆ ಪಕ್ಷಾಂತರ ಹೊಸದೇನಲ್ಲ. ರಾಜಕಾರಣದಲ್ಲಿ ವಲಸೆ ಹಕ್ಕಿ ಎಂದೇ ಕರೆಯಲ್ಪಡುವ ಅವರದು ಒಂದೂವರೆ ದಶಕದ ರಾಜಕೀಯ ಜೀವನದಲ್ಲಿ 7ನೇ ಪಕ್ಷಾಂತರ. ಜನತಾ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಾಜಿ ಸಚಿವ ಸಿಂಧ್ಯಾ ಜೆಡಿಎಸ್ನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಪಕ್ಷಕ್ಕೆ ವಿದಾಯ ಹೇಳುವ ಹಾದಿಯಲ್ಲಿದ್ದಾರೆ. ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ. ಸಿಂಧ್ಯಾ ಒಮ್ಮೆ ಬಹುಜನ ಸಮಾಜ ಪಕ್ಷ ಸೇರಿ ಅದರ ರಾಜ್ಯಾಧ್ಯಕ್ಷರಾಗಿದ್ದರು.
ಸಂಸತ್ತಿಗೆ ಸ್ಪರ್ಧಿಸಿದ್ದವರೇ: ಈಗಾಗಲೇ ಪಕ್ಷಾಂತರ ಮಾಡಿರುವ ಯೋಗೇಶ್ವರ್ ಮತ್ತು ತೇಜಸ್ವಿನಿ ಗೌಡ, ಜೆಡಿಎಸ್ ತೊರೆದು ಅನ್ಯ ಪಕ್ಷಕ್ಕೆ ಶಕ್ತಿ ಧಾರೆ ಎರೆಯಲು ಸಜ್ಜಾಗಿರುವ ಸಿಂಧ್ಯಾ ಈ ಮೂವರೂ ಇದೇ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದವರೇ ಎನ್ನುವುದು ವಿಶೇಷ. ತೇಜಸ್ವಿನಿಗೌಡ 2004ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಗೆಲುವು ಸಾಧಿಸಿ ಗಮನ ಸೆಳೆದಿದ್ದರು. 2009ರಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎದುರು ಬಿಜೆಪಿಯಿಂದ ಯೋಗೇಶ್ವರ್ ಮತ್ತು ಕಾಂಗ್ರೆಸ್ನಿಂದ ತೇಜಸ್ವಿನಿಗೌಡ ಸೆಣಸಿ ಸೋಲನುಭವಿಸಿದ್ದರು. ಇನ್ನು ಸಿಂಧ್ಯಾ ಕೂಡ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದವರು. 1984ರಲ್ಲಿ ಮತ್ತು 1989ರಲ್ಲಿ ಜನತಾ ಪರಿವಾರದ ಅಭ್ಯರ್ಥಿಯಾಗಿ ಪರಾಭವಗೊಂಡರು. ತೇಜಸ್ವಿನಿ ಅವರಿಗೆ ವಿಧಾನಸಭೆ ಪ್ರವೇಶದ ಅದೃಷ್ಟ ಒಲಿದಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸಿಂಧ್ಯಾ 6 ಮತ್ತು ಯೋಗೇಶ್ವರ್ 5 ಬಾರಿ ಗೆಲವು ಸಾಧಿಸಿದ್ದಾರೆ.
ಉಪ ಸಮರದಲ್ಲೇ ನೇಪಥ್ಯಕ್ಕೆ: ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ಉಪ ಚುನಾವಣೆಯಲ್ಲೇ ಜೆಡಿಎಸ್ನಿಂದ ಸಿಂಧ್ಯಾ ನೇಪಥ್ಯಕ್ಕೆ ಸರಿದಿದ್ದರು. ಸ್ವಕ್ಷೇತ್ರ ಕನಕಪುರದ ವ್ಯಾಪ್ತಿಯಲ್ಲಿ ನಡೆದಿದ್ದ ಆಗಿನ ಅಭ್ಯರ್ಥಿ ಅನಿತಾ ಮತ್ತು ಕುಮಾರಸ್ವಾಮಿ ಪ್ರಚಾರದಲ್ಲೆಲ್ಲೂ ಸಿಂಧ್ಯಾ ವೇದಿಕೆ ಹಂಚಿಕೊಂಡಿರಲಿಲ್ಲ. ಕನಕಪುರ ಕ್ಷೇತ್ರಾದ್ಯಂತ ಪ್ರಚಾರ ಮತ್ತು ಪ್ರವಾಸದಲ್ಲಿ ಕುಮಾರಸ್ವಾಮಿ ಅವರ ವಾಹನದಿಂದ ಆರೇಳು ವಾಹನಗಳ ಅಂತರದಲ್ಲಿ ಸಿಂಧ್ಯಾ ಕಾರು ಸಾಗುತ್ತಿತ್ತು. ಭಾಷಣಕ್ಕೆ ಸಿಂಧ್ಯಾ ಮೈಕ್ ಹಿಡಿಯಲಿಲ್ಲ. ಇದು ಕೂಡ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಂತರ 50 ಸಾವಿರಕ್ಕಿಂತ ಹೆಚ್ಚಲು ಕಾರಣವಾಯಿತು.
ವಿರಸ ಮರೆತು ಬೆಂಬಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಶಿವಕುಮಾರ್ ಪ್ರಯತ್ನ ಫಲಿಸಿರಲಿಲ್ಲ. ಆದರೆ, ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರೆನ್ನುವ ಆರೋಪವಿದೆ.
ಸಂಸದರಾಗಿದ್ದಾಗಲೇ ತೇಜಸ್ವಿನಿ ಗೌಡ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿತ್ತು. ಯೋಗೇಶ್ವರ್ ಮತ್ತು ಶಿವಕುಮಾರ್ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಇಷ್ಟಾಗಿಯೂ ಅವರಿಬ್ಬರೂ ಉಪ ಚುನಾವಣೆಯಲ್ಲಿ ವಿರಸ ಮರೆತು ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಪ್ರಮುಖ ಪಕ್ಷಗಳು ಎದುರಾಳಿ ಪಕ್ಷಗಳಲ್ಲಿರುವ ಅತೃಪ್ತರು, ಅಸಮಾಧಾನಿತರಿಗೆ ಗಾಳ ಹಾಕಿವೆ. ಕೆಲವರು ಪಕ್ಷಾಂತರದ ಸಿದ್ಧತೆಯಲ್ಲಿರುವ ಬಗ್ಗೆ ಮಾತು ಕೇಳಿ ಬರುತ್ತಿದೆ.
ರಾಜಕೀಯದಲ್ಲಿ ಸ್ಥಿತ್ಯಂತರ ಸಾಮಾನ್ಯ. ಸದ್ಯಕ್ಕೆ ನಾನು ಜೆಡಿಎಸ್ನಲ್ಲಿದ್ದೇನೆ. ಈ ಪಕ್ಷದಲ್ಲೇ ಮುಂದುವರೆಯುವಂತೆ ಕೆಲವು ಬೆಂಬಲಿಗರು, ಕಾಂಗ್ರೆಸ್ ಸೇರೋಣ ಎಂದು ಮತ್ತೆ ಕೆಲವರು, ಎರಡೂ ಬೇಡ ಬಿಜೆಪಿಗೆ ಹೋಗೋಣ ಎಂದು ಹಲವರು ಒತ್ತಡ ಹೇರುತ್ತಿದ್ದಾರೆ. ಶೀಘ್ರ ಸ್ಪಷ್ಟ ನಿರ್ಧಾರ ತಳೆಯುತ್ತೇನೆ.
- ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ
-ಮತ್ತೀಕೆರೆ ಜಯರಾಮ್