ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೌದ್ಧಿಕ ನೆಲೆ ವಿಸ್ತರಿಸುವ ರಂಗ ಕಲೆ

Vishwanath S
Updated On : 13 Mar 2014, 1:49 am

ಚನ್ನಪಟ್ಟಣ: ರಂಗ ಕಲೆ ಮನುಷ್ಯನ ಬೌದ್ಧಿಕ ನೆಲೆಯನ್ನು ವಿಸ್ತರಿಸುವ, ಮನೋಲ್ಲಾಸದ ಜತೆಗೆ ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ತಿಳಿಸುವ ಮಾಧ್ಯಮ ಎಂದು ಸಾರ್ವಜನಿಕ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಿ.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾನಿಕೇತನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಾರಾಯಣಗೌಡ ಮತ್ತು ನಾಗಮ್ಮ ನೆನಪಿನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕಾವ್ಯವನ್ನು ಸಹೃದಯರಿಗೆ ತಲುಪಿಸುವ ಪರಿಣಾಮಕಾರಿ ಮಾಧ್ಯಮವಾಗಿದ್ದು. ಸಾವಿರಾರು ವರ್ಷಗಳಿಂದ  ಅನಕ್ಷರಸ್ಥರಲ್ಲಿ ನೈತಿಕ ಮೌಲ್ಯ ಬೆಳೆಸುವ ಸಾಹಿತ್ಯದ ಪ್ರಕಾರವಾಗಿದೆ ಎಂದರು.
ಚಲನಚಿತ್ರ ಹುಟ್ಟಿದ್ದೆ ನಾಟಕ, ಕಲೆಯಿಂದ. ಯಕ್ಷಗಾನ, ಬಯಲಾಟ, ಪೌರಾಣಿಕ, ಐತಿಹಾಸಿಕ, ತೊಗಲುಗೊಂಬೆ ಇತ್ಯಾದಿಗಳ ಮೂಲಕ ನಾಟಕ ಕಲೆ ಪ್ರದರ್ಶನಗೊಳ್ಳುತ್ತಿದ್ದವು. ಕನ್ನಡದ ಭಾಷಾ ಬೆಳವಣಿಗೆಗೆ ರಂಗಭೂಮಿ ಅವಿಭಾಜ್ಯ ಅಂಗ, ಶಬ್ದ ಭಂಡಾರ ಹೆಚ್ಚಿಸಿಕೊಳ್ಳಲು ಸಹಕಾರಿ ಕಲೆಯ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಂಸ್ಕಾರವಂತರನ್ನಾಗಿಸುತ್ತಿದ್ದರು ಎಂದು ಹೇಳಿದರು.
ಸರ್ಕಾರ ಪಠ್ಯಕ್ರಮದಲ್ಲಿ ರಂಗಕಲೆಯನ್ನು ಸೇರಿಸದೆ ದ್ರೋಹ ಮಾಡಿದೆ. ಇಂತಹ ಅಪೂರ್ವ ರಂಗಕಲೆಯನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ತನ್ಮೂಲಕ ಅಪಾರ ಜ್ಞಾನಸಂಪತ್ತನ್ನು ಪಡೆಯಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
 ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದೃಶ್ಯಮಾಧ್ಯಮದ ಕೀಳು ಅಭಿರುಚಿಯ ಕಾರ್ಯಕ್ರಮಗಳತ್ತ ಆಕರ್ಷಿತರಾಗುವ ಮೂಲಕ  ಮೌಲ್ಯ ಹೀನ ಹಾದಿ ತುಳಿಯುತ್ತಿದ್ದು ಇವರಲ್ಲಿ ನಮ್ಮ ಸಂಸ್ಕೃತಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಉನ್ನತ ಜ್ಞಾನಾದರ್ಶ ಬಿತ್ತುವ ಉದ್ದೇಶದೊಂದಿಗೆ ಪರಿಷತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
 ಪ್ರಾಂಶುಪಾಲ ಟಿ.ಎಂ.ರಾಜು, ವಿಚಾರವಾದಿ ಒಕ್ಕೂಟದ ಸಂಚಾಲಕ ಸು.ನಾ ನಂದಕುಮಾರ್, ಸಮಾಜ ಸೇವಕ ಹೊಸಹಳ್ಳಿ ಶಿವರಾಮು, ರಂಗಕಲಾವಿದ ದತ್ತಿದಾನಿ ಎಂ.ಎನ್.ಸತ್ಯನಾರಾಯಣ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ನಾಗರಾಜು, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಚನ್ನವೀರೇಗೌಡ, ಉಪನ್ಯಾಸಕ ಬಿ.ಪಿ.ಸುರೇಶ್, ಮಹೇಶ್ ಉಪಸ್ಥಿತರಿದ್ದರು.
ರಂಗಭೂಮಿ ಕಲಾವಿದ ಕೂಡ್ಲೂರು ವೆಂಕಟೇಶ್, ರ್ಯಾಂಬೋ ಸುರೇಶ್, ರಾಂಪುರ ಸುರೇಶ್ ರಂಗಗೀತೆಗಳನ್ನು ಹಾಡಿದರು. ಶಾರದಾ ನಾಗೇಶ್, ವರಲಕ್ಷ್ಮೀ ಗೀತಗಾಯನ ನಡೆಸಿಕೊಟ್ಟರು. ಕಸಾಪ ಕಾರ್ಯದರ್ಶಿ ವಿಜಯ್ ರಾಂಪುರ ಸ್ವಾಗತಿಸಿದರು. ಮತ್ತೋರ್ವ ಕಾರ್ಯದರ್ಶಿ ರಾಮಕೃಷ್ಣಯ್ಯ ಬ್ರಹ್ಮಣೀಪುರ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement