ಶಾಸಕ ಸಿ.ಪಿ.ಯೋಗೇಶ್ವರ್ ಅವಕಾಶ ಸಿಂಧು ರಾಜಕಾರಣಿ: ಎನ್.ಎಚ್. ಅಶೋಕ್
ಮಾಗಡಿ: ಮಾಗಡಿ ಪಟ್ಟಣದ ಕಲ್ಯಾಗೇಟ್ ಹತ್ತಿರವಿರುವ ವಿದ್ಯಾನಗರ ಹಾಲು ಉತ್ಪದಾಕರ ಸಹಕಾರ ಸಂಘದ ಬಳಿ ಮಾ.14 ರಂದು 12 ಗಂಟೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಸಿದ್ಧತೆಗೆ ರೂಪರೇಷೆಗಳನ್ನು ಕುರಿತು ಚರ್ಚಿಸಲು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ ತಿಳಿಸಿದರು.
ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ದೇವೇಗೌಡರ ಕುಟುಂಬದ ಸದಸ್ಯರನ್ನೇ ನಿಲ್ಲಿಸುತ್ತದೆ ಎಂಬ ಆರೋಪ ಕೇಳಿ ಬರುವುದರಿಂದ ಅವರ ಕುಟುಂಬದ ಸದಸ್ಯರನ್ನು ಈ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವುದು ಬೇಡ
ಎಂಬ ನಿರ್ಧಾರಕ್ಕೆ ಪಕ್ಷ ಬಂದಿದೆ. ಈಗ ಕುಟುಂಬ ಸದಸ್ಯರನ್ನು ಹೊರತು ಪಡಿಸಿ ಪಕ್ಷದ ನಿಷ್ಠಾವಂತ ಪ್ರಭಾಕರ್ ರೆಡ್ಡಿ ಅವರನ್ನೇ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿಸಲಾಗುತ್ತಿದೆ ಎಂದರು.
ಸಿಪಿವೈ ಅವಕಾಶ ಸಿಂಧು ರಾಜಕಾರಿಣಿ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವಕಾಶ ಸಿಂಧು ರಾಜಕಾರಣಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೈಕಲ್ ಏರಿದ್ದ ಸಿಪಿವೈ ಮತ್ತೆ ಈಗ ಕೈ ಕುಲುಕುತ್ತಿದ್ದಾರೆ. ಅವರು ಕೇವಲ ಸಿನಿಮಾ ನಟರಲ್ಲ, ರಾಜಕೀಯ ರಂಗದಲ್ಲೂ ನಟಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ್ (ತಮ್ಮಾಜಿ) ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಗಡಿಯಲ್ಲಿ ಮಾ.14 ರದು ನಡೆಯಲಿರುವ ಜೆಡಿಎಸ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಚ್.ಸಿ. ಬಾಲಕೃಷ್ಣ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಕೆ.ರಾಜು, ನೆಲಮಂಗಲ ಶಾಸಕ ಡಾ. ಶ್ರೀನಿವಾಸಮೂರ್ತಿ, ಎಂಎಲ್ಸಿಗಳಾದ ಪುಟ್ಟಣ್ಣ, ಇ.ಕೃಷ್ಣಪ್ಪ, ಮಾಜಿ ಶಾಸಕ ನಾಗರಾಜಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರು, ಮಾಜಿ ಅಧ್ಯಕ್ಷರು, ತಾ.ಪಂ. ಅಧ್ಯಕ್ಷರು ಸದಸ್ಯರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪುರಸಭಾ ಸದಸ್ಯರು, ಮಾಜಿ ಅಧ್ಯಕ್ಷರು ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ ಎಂದು ಬೆಂಗಳೂರು ಹಾಲು ಸಹಕಾರಿ ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದರು.
ಜಿ.ಪಂ. ಸದಸ್ಯ ವಿಜಯಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್. ಮಂಜುನಾಥ್, ವಿದ್ಯಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ತಿಪ್ಪಸಂದ್ರ ವೆಂಕಟೇಶ್, ಕಿರಣ್ಕುಮಾರ್, ತೇಜ ಇತರರು ಇದ್ದರು.