ಉಪ ಚುನಾವಣೆಯಲ್ಲಿ ಬಿಜೆಪಿ ಕುತಂತ್ರಕ್ಕೆ ಜೆಡಿಎಸ್ ಬಲಿ
ರಾಮನಗರ: ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಕುತಂತ್ರಕ್ಕೆ ಜೆಡಿಎಸ್ ಬಲಿಯಾಯಿತು. ನಮ್ಮದೇ ಮತದಾರರಾಗಿದ್ದ ಅಲ್ಪ ಸಂಖ್ಯಾತರು ನಮ್ಮಿಂದ ದೂರ ಸರಿದರು. ಬಿಜೆಪಿ ಮತಗಳು ಕಾಂಗ್ರೆಸ್ಗೆ ವರ್ಗಾವಣೆಯಾದವು. ಹೀಗಾಗಿ ಅನಿತಾ ಕುಮಾರಸ್ವಾಮಿ ಸೋಲನುಭವಿಸಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ಲೇಷಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಲು ಒಳ ಸಂಚನ್ನು ರೂಪಿಸಿವೆ. ಇದನ್ನು ಮನಗಂಡು ಜೆಡಿಎಸ್ ಕಾರ್ಯಕರ್ತರು ಪಕ್ಷ ಮತ್ತು ತಮ್ಮ ಉಳಿವಿಗೆ ಹೋರಾಟ ನಡೆಸಬೇಕು ಎಂದು ನಗರದ ಮಂಜುನಾಥ ಕಲ್ಯಾಣ ಮಂಟಪದ ಆವರಣದಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಅವರು ಕರೆ ನೀಡಿದರು.
2009ರ ಚುನಾವಣೆಯಲ್ಲಿ ನನಗೆ 4.90 ಲಕ್ಷ ಮತಗಳು ಲಭಿಸಿದ್ದವು. ಬಿಜೆಪಿ 3.60 ಲಕ್ಷ ಹಾಗೂ ಕಾಂಗ್ರೆಸ್ 1.90 ಲಕ್ಷ ಮತ ಪಡೆದಿದ್ದವು. ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ ಬಿಜೆಪಿಯ ಆ ಮತಗಳು ಸಾರಾಸಗಟು ಕಾಂಗ್ರೆಸ್ ಅಭ್ಯರ್ಥಿಗೆ ಹೋದವು. ಆ ಪಕ್ಷಗಳ ಷಡ್ಯಂತ್ರ ಫಲಿಸಿತು ಎಂದು ವಿವರಿಸಿದರು.
ದೆಹಲಿ ಗದ್ದುಗೆ ನಮಗೇ: ರಾಜ್ಯದ ಮತದಾರರು 1996 ಲೋಕಸಭೆ ಚುನಾವಣೆ ಫಲಿತಾಂಶ ಮರುಕಳಿಸುವಂತೆ ಮಾಡಿದ್ದೇ ಆದರೆ ದೆಹಲಿಯಲ್ಲಿರುವ ರಾಷ್ಟ್ರದ ಗದ್ದುಗೆ ಮತ್ತೆ ದೇವೇಗೌಡರಿಗೆ ದಕ್ಕಲಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಸಂಕಲ್ಪ ತೊಡಬೇಕೆಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಹೆಸರು ಬದಲಾವಣೆ: ಪಿ.ಮುನಿರಾಜು ಬಿಜೆಪಿ ಅಭ್ಯರ್ಥಿ. ಪ್ರಚಾರ ಸಾಮಗ್ರಿಗಳಲ್ಲಿ ತುಳಸಿ ಪಿ. ಮುನಿರಾಜು ಎನ್ನುವ ಜತೆಗೆ ಆವರಣದಲ್ಲಿ ಗೌಡ್ರು ಎಂದು ಹಾಕಿಕೊಂಡಿದ್ದಾರೆ. ಹಾಗೆಂದು ನಮ್ಮ ಅಭ್ಯರ್ಥಿಯ ಹೆಸರನ್ನು ನಾವು ಬದಲಿಸಲು ಹೋಗುವುದಿಲ್ಲ. ಅವರು ಪ್ರಭಾಕರ ರೆಡ್ಡಿ ಹೆಸರಿನಲ್ಲೇ ಮತ ಯಾಚಿಸುತ್ತಾರೆ. ಅವರೂ ಒಕ್ಕಲಿಗರೇ ಎಂದು ಕುಮಾರಸ್ವಾಮಿ ತಿಳಿಸಿದರು.
ಸೋಲು ಒಪ್ಪಲಾರೆ: ನಾನು ಜೀವನದಲ್ಲಿ ಸಾವನ್ನು ಬೇಕಾದರೆ ಒಪ್ಪುತ್ತೇನೆ. ಆದರೆ, ಸೋಲನ್ನಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಮೂಲಕ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಅಧಿಪತ್ಯ ಸ್ಥಾಪನೆ ಮಾಡಿ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ವಿಜಯಮಾಲೆ ತೊಡಿಸುತ್ತೇನೆ ಎಂದು ಅಭ್ಯರ್ಥಿ ಪ್ರಭಾಕರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.