ದಾಖಲೆ ಇಲ್ಲದೆ ಹಣ ಸಾಗಣೆ ಅಪರಾಧ
ರಾಮನಗರ: ಲೋಕಸಭೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಾರ್ವಜನಿಕರು ದಾಖಲೆ ಇಲ್ಲದೆ ದೊಡ್ಡ ಮೊತ್ತದ ಹಣ ಇಟ್ಟುಕೊಳ್ಳುವುದು ಮತ್ತು ಸಾಗಣೆ ಮಾಡುವುದು ಅಪರಾಧ ಪ್ರಕರಣವಾಗುತ್ತದೆ ಎಂದು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಡಾ.ಡಿಎಸ್. ವಿಶ್ವನಾಥ್ ಎಚ್ಚರಿಸಿದರು.
ರು.50 ಸಾವಿರ ಮೇಲ್ಪಟ್ಟ ಹಣ ಸಾಗಣೆ ಮಾಡುವುದು ಅನಿವಾರ್ಯ ಆದಲ್ಲಿ ಅದಕ್ಕೆ ಸೂಕ್ತ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇಲ್ಲವಾದಲ್ಲಿ ಸದರಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
26 ತಂಡ ರಚನೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಗೆ ತರಲು ಈಗಾಗಲೇ 26 ಸ್ಟ್ಯಾಟಿಕ್ ಸರ್ವೆಲೆನ್ಸ್‌ತಂಡ(ಚೆಕ್ ಪೋಸ್ಟ್) ರಚಿಸಲಾಗಿದೆ. ಈ ಪೈಕಿ ರಾಮನಗರ ಜಿಲ್ಲೆಯಲ್ಲಿ 14 ತಂಡಗಳಿವೆ ಎಂದು ವಿಶ್ವನಾಥ್ ಹೇಳಿದರು.
ಉಳಿದ 11 ತಂಡಗಳು ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಮತ್ತು ಕುಣಿಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲಿವೆ. ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ತಂಡಗಳ ರಚನೆ ಇನ್ನೂ ಆಗಿಲ್ಲ ಎನ್ನುವ ಮಾಹಿತಿಯನ್ನು ಅವರು ನೀಡಿದರು.
ಎಂಸಿಸಿ ತಂಡ ರಚನೆ: ರಾಮನಗರ ಜಿಲ್ಲೆಯಲ್ಲಿ 25 ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 46 ಫ್ಲೈಯಿಂಗ್ ಸ್ಕ್ವಾಡ್ ತಂಡ(ಎಂಸಿಸಿ) ರಚಿಸಲಾಗಿದೆ. ರಾಮನಗರ ಜಿಲ್ಲೆಯಲ್ಲಿ 102 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವಿಶ್ವನ್‌ಥ್ ತಿಳಿಸಿದರು.
ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ವೀಡಿಯೋ ಸರ್ವೆಲೆನ್ಸ್ ತಂಡಗಳನ್ನು ರಚಿಸಿದ್ದು, ಈ ಪೈಕಿ ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಂಡಗಳಿವೆ. ರಾಮನಗರ ಜಿಲ್ಲೆಗೆ 4 ಸಹಿತ 8 ವಿಡಿಯೋ ವೀಕ್ಷಣಾ ತಂಡಗಳನ್ನೂ ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು.
ಖರ್ಚು ವೆಚ್ಚದ ವೀಕ್ಷಕ: ಅಭ್ಯರ್ಥಿಗಳ ಖರ್ಚುವೆಚ್ಚದ ಮೇಲೆ ನಿಗಾ ಇಡಲು ಜಿಲ್ಲಾ ಮಟ್ಟದಲ್ಲಿ ಸಹಾಯಕ ವೀಕ್ಷಕರನ್ನು ನೇಮಿಸಲಾಗಿದ್ದು, ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಅಕೌಂಟಿಂಗ್ ತಂಡ ರಚಿಸಲಾಗಿದೆ ಎಂದು ವಿಶ್ವನಾಥ್ ಹೇಳಿದರು.
ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಡುವ ಎಲ್ಲಾ ಅಧಿಕಾರಿ, ನೌಕರರು ಮತದಾನ ಮಾಡಲು ಅನುಕೂಲವಾಗುವಂತೆ ಅಂಚೆ ಮತಪತ್ರ, ಇಡಿಸಿಗೆ ಅರ್ಜಿಯನ್ನು ನಮೂನೆ 12 ಮತ್ತು 12ಎ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.
ತಮ್ಮ ಹೆಸರು, ಯಾವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆಯೋ ಅದರ ಭಾಗ ಮತ್ತು ಕ್ರಮಸಂಖ್ಯೆ ನಮೂದಿಸಿ ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಅಳವಡಿಸಲು ಸೂಚಿಸಲಾಗಿದೆ ಎಂದರು.
ಮತದಾರರ ಹೆಚ್ಚಳ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ 2497 ಮತಗಟ್ಟೆಗಳಲ್ಲಿ ಒಟ್ಟು 20,76,885 ಹೆಸರುಗಳು ಮತದಾರರ ಪಟ್ಟಿಯಲ್ಲಿವೆ. ಇದರಲ್ಲಿ 10,76,000 ಪುರುಷ ಮತದಾರರು, 10,00,666 ಮಹಿಳಾ ಮತದಾರರು ಹಾಗೂ 219 ಇತರೆ ಮತದಾರರು ನೋಂದಾಯಿಸಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.
ಮತದಾರರ ನೋಂದಣಿಗೆ ಸಂಬಂಧಿಸಿದಂತೆ ನಡೆದ ಕಾರ್ಯಾಗಾರದಲ್ಲಿ ರಾಮನಗರ ಜಿಲ್ಲೆಯಲ್ಲೇ 14,466 ಅರ್ಜಿಗಳು ಹೆಸರು ಸೇರ್ಪಡೆಗಾಗಿ ಸಲ್ಲಿಕೆಯಾಗಿವೆ. ಪಟ್ಟಿಯಲ್ಲಿ ಎರಡೆರಡು ಕಡೆ ಇದ್ದ ಹೆಸರುಗಳನ್ನು ಕೈಬಿಡಲಾಗಿದೆ. ಎರಡು ಕಡೆ ಮತದಾನ ಹೊಂದುವುದೂ ಅಪರಾಧವಾಗಿದ್ದು, ಯಾವುದಾದರೂ ಒಂದು ಕಡೆ ಉಳಿಸಿಕೊಳ್ಳಲು ಮತದಾರರಿಗೆ ಅವಕಾಶ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಬಸವರಾಜು, ಚುನಾವಣಾ ತಹಸೀಲ್ದಾರ್ ಹೊನ್ನಶಾಮೇಗೌಡ ಹಾಜರಿದ್ದರು.
ದೂರುಗಳಿಗೆ ಕರೆ ಮಾಡಿ
ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುವುದು. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ದೂರವಾಣಿ ಸಂಖ್ಯೆಗಳ ವಿವರ ಇಲ್ಲಿದೆ.
ಜಿಲ್ಲಾಧಿಕಾರಿಗಳ ಕಚೇರಿ 080-27276625
ಉಪ ವಿಭಾಗಾಧಿಕಾರಿ ಕಚೇರಿ 080-27271229
ರಾಮನಗರ ತಾಲೂಕು ಕಚೇರಿ 080-27307173
ಚನ್ನಪಟ್ಟಣ ತಾಲೂಕು ಕಚೇರಿ 080-27256136
ಕನಕಪುರ ತಾಲೂಕು ಕಚೇರಿ 080-27522442
ಮಾಗಡಿ ತಾಲೂಕು ಕಚೇರಿ 080-27745651