ರಾಮನಗರ ಡಿಸಿಗೆ ರು. 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ನ್ಯಾಯಾಲಯದ ಆದೇಶವಿದ್ದರೂ ಪ್ರಕರಣವೊಂದರ ವಿಚಾರಣೆಗೆ 34ಕ್ಕೂ ಹೆಚ್ಚಿನ ವರ್ಷಗಳ ಕಾಲ ವಿಳಂಬ ನೀತಿ ಅನುಸರಿಸಿದ ರಾಮನಗರ ಜಿಲ್ಲಾಧಿಕಾರಿಗೆ ಹೈಕೋರ್ಟ್ ರು. 1 ಲಕ್ಷ ದಂಡ ವಿಧಿಸಿದೆ.
ಚನ್ನಬಸವಯ್ಯ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಭೂಮಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದ ವಿವಾದವನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸುವಂತೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರ 1980ರಲ್ಲೇ ಆದೇಶ ನೀಡಿತ್ತು. ಅಲ್ಲದೆ, 2007 ಹಾಗೂ 2012ರಲ್ಲಿ ಹೈಕೋರ್ಟ್ ಕೂಡ ಇದೇ ಆದೇಶ ನೀಡಿದ್ದರೂ, ಅದನ್ನು ಪಾಲಿಸದ ಆರೋಪದ ಮೇಲೆ ಜಿಲ್ಲಾಧಿಕಾರಿಗೆ ನ್ಯಾಯಪೀಠ ದಂಡ ವಿಧಿಸಿದ್ದು, ಆ ದಂಡದ ಮೊತ್ತವನ್ನು 15 ದಿನಗಳಲ್ಲಿ ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದೆ. ಜೊತೆಗೆ, ಪ್ರಕರಣವನ್ನು ಐದು ತಿಂಗಳಲ್ಲಿ ಇತ್ಯರ್ಥಗೊಳಿಸುವಂತೆ ಆದೇಶಿಸಿದೆ.
ಜನರ ಸಂಕಷ್ಟದ ಅರಿವಿರಬೇಕು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತವರಿಗೆ ಜನರ ಸಂಕಷ್ಟದ ಅರಿವಿರಬೇಕು. ಆದರೆ, ನೀವು ನಿರಂತರವಾಗಿ ವರ್ಗವಾಗುತ್ತೀರಿ. ನಿಮ್ಮ ಕಚೇರಿ ಎದುರು ಜನರು ಪ್ರತಿನಿತ್ಯ ಮುಂಜಾನೆಯಿಂದ ಸಂಜೆಯವರೆಗೆ ಕಾಯುತ್ತಿರುತ್ತಾರೆ. ಅವರ ಸಂಕಷ್ಟಕ್ಕೆ ನೀವು ಸ್ಪಂದಿಸುವುದಿಲ್ಲ. ಅರ್ಜಿದಾರರು ದೂರು ಸಲ್ಲಿಸಿ ಇಷ್ಟು ವರ್ಷಗಳಾದರೂ ಏಕೆ ಏನು ಕ್ರಮ ಕೈಗೊಂಡಿಲ್ಲ. ನಿಮ್ಮ ಕಾರಣಕ್ಕಾಗಿ ಅವರು ನ್ಯಾಯಾಲಯಗಳಿಗೆ ಎಡತಾಕಿ ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ. ಈಗ ಅದನ್ನು ಭರಿಸುವುದು ನಿಮ್ಮ ಜವಾಬ್ದಾರಿ ಎಂದು ಪೀಠ ತಿಳಿಸಿದೆ.
ಈ ಸಂದರ್ಭದಲ್ಲಿ ಹಾಜರಿದ್ದ ರಾಮನಗರ ಜಿಲ್ಲಾಧಿಕಾರಿ ವಿಶ್ವನಾಥ್, ತಾವು ಆದಷ್ಟು ಶೀಘ್ರದಲ್ಲಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಮನವಿ ಮಾಡಿದರಾದರೂ, ಅದನ್ನು ಪರಿಗಣಿಸಲು ಪೀಠ ನಿರಾಕರಿಸಿತು.
ವಿವಾದವೇನು?: ರಾಮನಗರದ ಚನ್ನಬಸವಯ್ಯ ಎಂಬಾತನಿಗೆ 1978ರಲ್ಲಿ ರಾಮನಗರ ಜಿಲ್ಲಾಧಿಕಾರಿಗಳು 2 ಎಕರೆ 2 ಗುಂಟೆ ಜಮೀನು ಮಂಜೂರು ಮಾಡಿದ್ದರು. ಇದನ್ನು ಪ್ರಶ್ನಿಸಿ ಕೆಲ ಸ್ಥಳೀಯರು ಸಲ್ಲಿಸಿದ ಅರ್ಜಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಭೂಮಿಯನ್ನು ಹಿಂಪಡೆದಿದ್ದರು. ಇದನ್ನು ಪ್ರಶ್ನಿಸಿ ಬಸವಯ್ಯ ಅವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದರು. ಅರ್ಜಿಯನ್ನು ಪರಿಗಣಿಸಿದ್ದ ಪ್ರಾಧಿಕಾರ, ಜಿಲ್ಲಾಧಿಕಾರಿ ಆದೇಶ ರದ್ದುಗೊಳಿಸಿತ್ತಲ್ಲದೆ, ಆರು ತಿಂಗಳಲ್ಲಿ ಪ್ರಕರಣದ ಮರುವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಆದರೆ, ಜಿಲ್ಲಾಧಿಕಾರಿಗಳು ಈ ಆದೇಶ ಪಾಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಬಸವಯ್ಯ ಅವರು, 2007ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಆರು ತಿಂಗಳಲ್ಲಿ ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಆದರೆ, ಈ ಆದೇಶ ಕೂಡ ಪಾಲನೆಯಾಗಿರಲಿಲ್ಲ. ಇದನ್ನು ಪ್ರಶ್ನಿಸಿ 2012ರಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿಯಲ್ಲಿ ಕೂಡ ನ್ಯಾಯಪೀಠ ಅದೇ ಆದೇಶ ನೀಡಿತ್ತು. ಇಷ್ಟಾದರೂ, ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.