ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇತಿಹಾಸ ಪ್ರಸಿದ್ಧ ತೂಬಗೆರೆ ವೆಂಕಟರಮಣ ರಥೋತ್ಸವ

Vishwanath S
Updated On : 17 Mar 2014, 1:36 am

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ, ಹೋಳಿ ಹುಣ್ಣಿಮೆ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಭಾನುವಾರದಂದು ಸಂಭ್ರಮದಿಂದ ನಡೆಯಿತು.
ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀಸ್ವಾಮಿಯ ತೇರಿಗೆ ಹಣ್ಣು-ಧವನ ಸಮರ್ಪಿಸಿ ಭಕ್ತಿಭಾವ ಮೆರೆದರು. ಐತಿಹಾಸಿಕ ನೆಲೆಯಾಗಿ ಗುರುತಿಸಿಕೊಂಡಿರುವ ಈ ದೇವಾಲಯ ಬೆಂಗಳೂರು ಪ್ರಾಂತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪಾಳೇಗಾರರು, ಹೊಯ್ಸಳರು, ಗಂಗರು ಸೇರಿದಂತೆ ಅನೇಕ ರಾಜಮನೆತನಗಳ ಆಳ್ವಿಕೆಯ ಕುರುಹುಗಳು ತಾಲೂಕಿನ ಹಲವಡೆ ಕಂಡುಬರುತ್ತವೆ. ಈ ಹಂತದಲ್ಲಿ ಸುಮಾರು 6 ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಲಕ್ಷ್ಮೀವೆಂಕಟರಮಣಸ್ವಾಮಿ ಮೂಲ ದೇವರಿದೆ. ಪ್ರಖ್ಯಾತ ಯಾತ್ರಾಸ್ಥಳವಾಗಿರುವ ತಿರುಪತಿ ವೆಂಕಟರಮಣನ ಮೂಲ ಪ್ರಾಣ ದೇವರು ಇದು ಎಂಬ ಐತಿಹ್ಯ ಸ್ಥಳೀಯವಾಗಿ ಜನಜನಿತವಾಗಿದೆ. ಅಂದಿನ ಕಾಲದಲ್ಲಿ ಪಾಳೇಗಾರರ ಮೂಲಕ ಪ್ರತಿಷ್ಠಾಪನೆಗೊಂಡ ದೇವಾಲಯದಲ್ಲಿ ಪರಂಪರಾಗತವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಕಳೆದ ಬುಧವಾರದಿಂದ ಆರಂಭವಾಗಿರುವ ಕಾರ್ಯಕ್ರಮಗಳು 14 ದಿನಗಳ ಕಾಲ ನಡೆಯಲಿವೆ. ವಿವಿಧ ಜಾತಿ-ಧರ್ಮಗಳ ಸಂಕೋಲೆ ಮೀರಿ ಎಲ್ಲ ವರ್ಗದ ಜನ ಜಾತ್ರೆಯಲ್ಲಿ ಭಾಗವಹಿಸುವುದು ಇಲ್ಲಿನ ವಿಶೇಷ. ಜಾತ್ರೆ ಅಂಗವಾಗಿ ದೇವಾಲಯದ ಮೂಲವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಅನೇಕ ಗಣ್ಯರು, ರಾಜಕೀಯ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement