ಬಿಡದಿ ಟೊಯೋಟಾ ಘಟಕಕ್ಕೆ ಹೊರಗೀಲಿ
ಮುಂಬೈ/ರಾಮನಗರ: ಬಿಡದಿಯಲ್ಲಿರುವ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಘಟಕದಲ್ಲಿ ಲಾಕೌಟ್ನಲ್ಲಿ ಘೋಷಿಸಲಾಗಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ನೌಕರರ ನಡುವಿನ ಮಾತುಕತೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಟೊಯೋಟಾ ಕಿರ್ಲೋಸ್ಕರ್ನ ಎರಡು ಘಟಕಗಳು ಬಿಡದಿಯಲ್ಲಿ ಕಾರ್ಯವೆಸಗುತ್ತಿದ್ದು, ಪ್ರತಿ ವರ್ಷ 3,10,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹೇಳಿಕೆಯಲ್ಲಿ ಸ್ಪಷ್ಟನೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ವೇತನ ಪರಿಷ್ಕರಣೆ ಬಗ್ಗೆ ಹತ್ತು ತಿಂಗಳಿನಿಂದ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿತ್ತು. ಎರಡೂ ಪಕ್ಷಗಳ ನಡುವೆ ಈ ಬಗ್ಗೆ ಯಾವುದೇ ರೀತಿಯ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಕಾರ್ಮಿಕ ಇಲಾಖೆ ಕೂಡ ಏಳು ತ್ರಿಪಕ್ಷೀಯ ಮಾತುಕತೆ ನಡೆಸಿತ್ತು. ಅದೂ ಯಶಸ್ವಿಯಾಗಲಿಲ್ಲ. ಹೀಗಾಗಿ ಲಾಕೌಟ್ಗೆ ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಮಾತುಕತೆ ನಡೆಯುತ್ತಿದೆ: ಲಾಕೌಟ್ ಘೋಷಣೆ ಮಾಡಲಾಗಿದ್ದರೂ, ಸೌಹಾರ್ದಯುತವಾಗಿ ಪರಿಸ್ಥಿತಿ ತಿಳಿಗೊಳಿಸಲು ಮಾತುಕತೆ ಮುಂದುವರಿಯುತ್ತಿದೆ. ಆದರೂ ನೌಕರರ ಒಂದು ವರ್ಗ ಉತ್ಪಾದನೆ ತಡೆಯಲು ಯತ್ನಿಸುತ್ತಿದೆ ಎಂದು ಆಡಳಿತ ಮಂಡಳಿ ಹೇಳಿಕೆಯಲ್ಲಿ ದೂರಿದೆ.
ವೇತನ ಪರಿಷ್ಕರಣೆ ಮಾಡಿಲ್ಲ: ಈ ನಡುವೆ ರಾಮನಗರದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಮುಖಂಡರು ಹದಿನಾಲ್ಕು ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಟೊಯೋಟಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ನಷ್ಟವಿಲ್ಲದೆ ಕಂಪನಿ ನಡೆಯುತ್ತಿದೆ. ಹೀಗಿದ್ದರೂ ನೌಕರರಿಗೆ ನೋಟಿಸ್ ನೀಡದೆ ಲಾಕೌಟ್ಗೆ ಮುಂದಾಗಿರುವ ಆಡಳಿತ ಮಂಡಳಿಯ ನಿರ್ಣಯ ಕಾನೂನು ಬಾಹಿರ ಎಂದು ಪ್ರತಿಪಾದಿಸಿದ್ದಾರೆ. ನಿರ್ಧಾರ ಹಿಂಪಡೆಯದಿದ್ದರೆ ಕಂಪನಿ ಆವರಣದಲ್ಲಿ ಕುಟುಂಬ ಸದಸ್ಯರ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕಾರ್ಮಿಕರನ್ನು ಹತ್ತಿಕ್ಕಲು ಬೀಗಮುದ್ರೆ
ಬೆಂಗಳೂರು: ಕಾರ್ಮಿಕರನ್ನು ಹತ್ತಿಕ್ಕುವ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯನ್ನು ಲಾಕ್ಔಟ್ ಮಾಡಲಾಗಿದೆ ಎಂದು ಕಂಪನಿ ನೌಕರರ ಸಂಘ ಆರೋಪಿಸಿದ್ದು, ಕಂಪನಿ ಬಾಗಿಲು ಮತ್ತೆ ತೆರೆಯಬೇಕು ಎಂದು ಆಗ್ರಹಿಸಿದೆ.
ಕಾರ್ಖಾನೆ ಕಾರ್ಮಿಕ ಸಂಘವು ಕೆಲವು ಬೇಡಿಕೆಗಳನ್ನು ಕಂಪನಿ ಮುಂದಿಟ್ಟಿತ್ತು. ಅದನ್ನು ಈಡೇರಿಸಲು ಆಗದ ಕಾರಣ ಹಾಗೂ ಕಾರ್ಮಿಕರ ಬಾಯಿ ಮುಚ್ಚಿಸುವ ಉದ್ದೇಶದಿಂದ ಕಂಪನಿ ಮುಚ್ಚಲಾಗಿದೆ. ಇದರಿಂದ ಸಾವಿರಾರು ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಬೀಗಮುದ್ರೆ ತೆರವುಮಾಡಿ ಮತ್ತೆ ಕಂಪನಿ
ತೆರೆಯಬೇಕು ಎಂದು ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಅವರು, ಸಂಬಳ ಹೆಚ್ಚಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಒತ್ತಾಯಿಸುತ್ತಿದ್ದರು. ಸುಮಾರು ವರ್ಷದಿಂದ ಕಂಪನಿ ಹಾಗೂ ಕಾರ್ಮಿಕರ ನಡುವೆ ಗುದ್ದಾಟ ನಡೆಯುತ್ತಿತ್ತು. ಈ ವಿಚಾರ ಕಾರ್ಮಿಕ ಇಲಾಖೆ ಆಯುಕ್ತರ ಕಚೇರಿ ಮೆಟ್ಟಿಲೇರಿದರೂ ಪ್ರಯೋಜನವಾಗಿಲ್ಲ. ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಕಾರ್ಮಿಕ ಇಲಾಖೆಯೂ ಸೂಚಿಸಿದ್ದರೂ ಸಹ ಅಧಿಕಾರಿಗಳು ಅದಕ್ಕೆ ಕಿವಿಕೊಟ್ಟಿರಲಿಲ್ಲ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೂ ಪ್ರಯೋಜನವಾಗಿರಲಿಲ್ಲ ಎಂದರು.
ಬೇಡಿಕೆ ಈಡೇರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕಂಪನಿಯನ್ನು ಮುಚ್ಚಲಾಗಿದೆ. ಭಾನುವಾರ ಬೆಳಗ್ಗೆ ಕಾರ್ಮಿಕರಿಗೆ ಈ ಮಾಹಿತಿ ಬಂದಿದ್ದು, ಎಲ್ಲರಿಗೂ ಆಶ್ಚರ್ಯ ಹಾಗೂ ಆತಂಕ ಉಂಟಾಗಿದೆ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅವರಿಂದ ಕಂಪನಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಹೊರಿಸಿ ಕಂಪನಿ ಮುಚ್ಚಿರುವುದು ಸರಿಯಲ್ಲ. ಕಂಪನಿಯ ಈ ನಿರ್ಧಾರದಿಂದ ಸುಮಾರು 20 ಸಾವಿರ ಸಿಬ್ಬಂದಿ ಬೀದಿಗೆ ಬೀಳಲಿದ್ದಾರೆ. ಸಮಸ್ಯೆ ಈಡೇರಿಸುವುದನ್ನೇ ಮುಂದಿಟ್ಟುಕೊಂಡು ಕಂಪನಿ ಮುಚ್ಚಿರುವುದು ಸರಿಯಲ್ಲ. ಈ ಸಂಬಂಧ ಕಾರ್ಮಿಕ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಚರ್ಚಿಸಿ ಕಂಪನಿ ಬಾಗಿಲು ತೆರೆಯಬೇಕು. ಯಾವುದೇ ಕಾರಣಕ್ಕೂ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಕಂಪನಿ ಯಾವುದಕ್ಕೂ ಮಣಿಯದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಕಾರ್ಮಿಕರ ಜತೆ ಸೇರಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪ್ರಸನ್ನ ತಿಳಿಸಿದರು.
ಬಿಡದಿ ಘಟಕದ ಬಗ್ಗೆ
ಟಿ 1997ರ ಅಕ್ಟೋಬರ್ನಲ್ಲಿ ಘಟಕ ಸ್ಥಾಪನೆ
ಟಿ ಟಯೋಟಾ ಮತ್ತು ಪುಣೆ ಮೂಲದ ಕಿರ್ಲೊಸ್ಕರ್ ಸಂಸ್ಥೆ ನಡುವೆ 89:11 ಮಾದರಿಯಲ್ಲಿ 2 ಘಟಕಗಳ ಆರಂಭ
ಟಿ 6,400 ಮಂದಿಗೆ ಉದ್ಯೋಗ
ಟಿ ಮೊದಲ ಕಾರು ಉತ್ಪಾದನೆಯಾದ ವರ್ಷ- 1999 ಡಿಸೆಂಬರ್
ಟಿ 432 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ 2 ಘಟಕಗಳು