ರಥಕ್ಕೆ ತಹಸೀಲ್ದಾರ್ ಶಿವಕುಮಾರ್ ಪೂಜೆ
ಮಾಗಡಿ: ತಾಲೂಕಿನ ಸುಗ್ಗನಹಳ್ಳಿಯಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣಿಯಿಂದ ಜರುಗಿತು.
ತಹಸೀಲ್ದಾರ್ ಶಿವಕುಮಾರ್ ರಥಕ್ಕೆ ಪ್ರಥಮ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಗೋವಿಂದ ನಾಮ ಸ್ಮರಣೆಯಿಂದ ರಥಕ್ಕೆ ಬಾಳೆಹಣ್ಣು ಧವನ ಎಸೆದು ರಥ ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ಇದೇ ವೇಳೆ ವಿವಿಧ ಸಮಾಜದವರಿಂದ ದೇವರ ಹೆಸರಿನಲ್ಲಿ ಅಲ್ಲಲ್ಲಿ ಪಾನಕ ಮಜ್ಜಿಗೆ ಕೋಸಂಬರಿ ವಿತರಣೆ ಅವಿರತವಾಗಿ ನಡೆದಿತ್ತು. ದೇವಾಲಯದಲ್ಲಿ ದೇವರ ದರ್ಶನ ಪಡೆದ ಎಲ್ಲಾ ಭಕ್ತಿರಿಗೂ ವಿಶೇಷವಾಗಿ ಪುಳಿಯೋಗರೆ ವಿತರಣೆ ನಡೆದಿತ್ತು. ರಾಜ್ಯದಲ್ಲಿ ಬಹುತೇಕ ದೇವಾಲಯಗಳಲ್ಲಿರುವ ಗರುಡನಿಗೆ ವಿಶೇಷ ಪೂಜೆ ನಡೆಯುವುದಿಲ್ಲ, ಆದರೆ ಇಲ್ಲಿ ಗುರುಡ ಮೂರ್ತಿಗೆ ವಿಶೇಷವಾಗಿ ಅಭಿಷೇಕ, ಅರ್ಚನೆ, ನಿತ್ಯ ಪೂಜೆ ನೆರವೇರುತ್ತದೆ. ಪ್ರಥಮ ಪೂಜೆ ಗರುಡನಿಗೆ ಅರ್ಪಿಸಿ ನಂತರವೇ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗುವುದು. ಪ್ರತಿ ವರ್ಷವೂ ರಥ ಚಾಲನೆಗೆ ಮುನ್ನ ರಥದ ಮೇಲೆ ಗರುಡ ಪಕ್ಷಿ ಪ್ರದಕ್ಷಣೆ ಹಾಕಿದ ಮೇಲೆಯೇ ರಥ ಎಳೆಯುವುದು ಪ್ರತೀತಿ.
ಈ ಬಾರಿಯೂ ಸಹ ಗರುಡ ಪಕ್ಷಿ ಪ್ರದಕ್ಷಣೆ ಹಾಕಿದ ಮೇಲೆ ರಥಕ್ಕೆ ತಹಸೀಲ್ದಾರ್ ಶಿವಕುಮಾರ್ ಚಾಲನೆ ನೀಡಿದರು. ಅರ್ಚಕ ನರಸಿಂಹಭಟ್ ದೇವರಿಗೆ ಅಭಿಷೇಕ, ಅರ್ಚನೆ ವಿಶೇಷ ಅಲಂಕಾರ ಏರ್ಪಡಿಸಿದ್ದರು. ನಂತರ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಿದರು.
ಶಾಸಕ ಎಚ್.ಸಿ. ಬಾಲಕೃಷ್ಣ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಪುರುಷೋತ್ತಮ್, ಜಗದೀಶ್, ನಾರಾಯಣಸ್ವಾಮಿ, ಜಿ.ಪಂ. ಸದಸ್ಯೆ ಹಂಸಕುಮಾರಿ, ಮಾಜಿ ಸದಸ್ಯ ವೀರಪ್ಪ, ಕುದೂರು ಹನುಮಂತರಾಯಪ್ಪ, ಕಣ್ಣೂರು ಜಯಶಂಕರ್, ಗ್ರಾ.ಪಂ. ಅಧ್ಯಕ್ಷ ಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ, ಲಕ್ಷ್ಮಣ್ ಭಟ್, ಸಾರಂಗಪಾಣಿ, ರಂಗನಾಥ್, ಮಂಜುನಾಥ್, ಸಂಪತ್ ಕುಮಾರ್, ಬಾಲಾಜಿ ಚಿತ್ರ ಮಂದಿರ ಮಾಲೀಕ ರಂಗನಾಥ್ ಇತರೆ ಗಣ್ಯರು ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥ ಎಳೆದು ಭಕ್ತಿಭಾವ ಮೆರೆದು ಪುನೀತರಾದರು.
ದೇವರ ಮುಂದೆ ಬರೀ ಅರ್ಚಕರ ದಂಡೆ ನೆರೆದಿತ್ತು. ಎಷ್ಟೋ ಭಕ್ತರು ದೇವರ ದರ್ಶನ ಮಾಡಲಾಗದೆ ಅರ್ಚರ ದರ್ಶನ ಮಾಡಬೇಕಾಯಿತು. ಮುಜರಾಯಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯದಲ್ಲಿ ಅವ್ಯವಸ್ಥೆ ಆಗರದಿಂದ ಕೂಡಿದೆ ಎಂದು ಭಕ್ತರು ತಮ್ಮ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡರು.