ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿಗೆ ಗ್ರಾಮೋದಯ ಅನಿವಾರ್ಯ

Mainashree
Updated On : 18 Mar 2014, 12:59 pm

ಚನ್ನಪಟ್ಟಣ: ಸರ್ವೋದಯ, ಅಂತ್ಯೋದಯದಂತೆ ಗ್ರಾಮೀಣಗಳ ಅಭಿವೃದ್ಧಿಗೆ ಗ್ರಾಮೋದಯ ಅನಿವಾರ್ಯ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿ ನಡೆದ ಕುವೆಂಪು, ದೇಜಗೌ ಸಾಂಸ್ಕೃತಿ ಪ್ರತಿಷ್ಠಾನ ಹಾಗೂ ಕರ್ನಾಟಕ ಗ್ರಾಮೀಣ ಪ್ರತಿಷ್ಠಾನಗಳ   ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮಗಳು ಸುಸ್ಥಿತಿಯಲ್ಲಿದ್ದರೆ  ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಹಾತ್ಮ ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಗ್ರಾಮಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಮುಂದಾಗಿ ಎಂದು ಕರೆ ಇತ್ತರು.
ಕುವೆಂಪು ಹಾಗೂ ದೇಜಗೌ ಅವರಿಬ್ಬರೂ ಒಂದೇ ತತ್ವದ ಎರಡು ಮುಖ. ಸಾಂಸ್ಕೃತಿಕವಾಗಿ ಹಾಗೂ  ಸಾಹಿತ್ಯಕವಾಗಿ ಇಬ್ಬರ ಸಾಧನೆಯು ಅನನ್ಯ ಎಂದ ಅವರು ಕುವೆಂಪು ಮಾನವ ಹೃದಯ ಕ್ಷೇತ್ರದ ದೇವಕೃಷಿಕರಾದರೆ, ದೇಜಗೌ ಕನ್ನಡದ ಕುಲಪತಿ.
ಕುವೆಂಪುರವರ ಕನಸನ್ನು ನನಸು ಮಾಡಲು ದೇಜಗೌರವರು ಅವಿರತ ಶ್ರಮಿಸುತ್ತಿದ್ದಾರೆ. ಜಾನಪದವನ್ನು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿಸಿದ ದೇಜಗೌ ಎಂದು ತಿಳಿಸಿದರು.
ಗ್ರಾಮೀಣ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದ ನಾಡೋಜ ದೇ.ಜವರೇಗೌಡ, ಕನ್ನಡ ಪರಿಪಕ್ವವಾದ ಭಾಷೆಯಾಗಿದ್ದು, ಕನ್ನಡ ನೆಲ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ  ಶ್ರೀಮಂತವಾಗಿದೆ. ಇಲ್ಲಿರುವಷ್ಟು ಕವಿಗಳು ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲ. ಕುವೆಂಪು ಭರತ ಕವಿ ಮಾತ್ರವಲ್ಲ, ಅವರ ಜಗತ್ತಿನ ಕವಿ ಎಂದು ಬಣ್ಣಿಸಿದರು.
ನೂತನವಾಗಿ ಉದ್ಘಾಟನೆಗೊಂಡಿರುವ ಈ ಎರಡೂ ಪ್ರತಿಷ್ಠಾನಗಳು ಕೇವಲ ತಾಲೂಕು ಮಟ್ಟಕಷ್ಟೇ ಸೀಮಿತವಾಗದೇ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇನ್ನಿತರ ಸಂಘಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ಆಶಿಸಿದರು.  ಕಾರ್ಯಕ್ರಮದಲ್ಲಿ ಲೇಖಕ ಎಲೆಕೇರಿ ಶಿವರಾಂ ಅವರ ಒರತೆ ಕೃತಿಯನ್ನು ಶಾಸಕ ಸಿ.ಪಿ.ಯೋಗೇಶ್ವರ್ ಲೋಕಾರ್ಪಣೆ ಮಾಡಿದರು. ಎರಡೂ ಪ್ರತಿಷ್ಠಾನಗಳ ಅಧ್ಯಕ್ಷ ಡಾ. ಚಕ್ಕೆರೆಶಿವಶಂಕರ್, ಸದಸ್ಯ  ಸು.ತ. ರಾಮೇಗೌಡ , ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮಳಲಿ ವಸಂತಕುಮಾರ್ , ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಪ್ರೊ.ಮಾಯಿಗೇಗೌಡ,  ಪ್ರತಿಷ್ಠಾನದ ನಿರ್ದೇಶಕ ಡಾ.ಟಿ.ಕೆ.ಕೆಂಪೇಗೌಡ, ವಿಜಯ್ ರಾಂಪುರ, ಮತ್ತೀಕೆರೆ ಚಲುವರಾಜು, ಆರ್.ಜನಾರ್ದನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement