ಎಚ್ಡಿಕೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿ: ತಾ.ಜೆಡಿಎಸ್ ವಿಶ್ವಾಸ
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗುವ ಕುರಿತು ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಕಾರ್ಯಕರ್ತರಲ್ಲೂ ಹೊಸ ಉತ್ಸಾಹ ಮೂಡಲು ಕಾರಣವಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಗೋವಿಂದರಾಜು ಹೇಳಿದರು.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಮಾ.20ರಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆಯುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ದೊಡ್ಡಬಳ್ಳಾಪುರದಿಂದಲೂ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅದೇ ಸಮಾವೇಶದಲ್ಲಿ ಕ್ಷೇತ್ರದ ಅಭ್ಯರ್ಥಿಯ ಅಧಿಕೃತ ಘೋಷಣೆ ಆಗಲಿದೆ ಎಂದರು. ನಿಜವಾದ ಜೆಡಿಎಸ್ ಕಾರ್ಯಕರ್ತರಾರೂ ಪಕ್ಷ ಬಿಡುತ್ತಿಲ್ಲ. ಆದರೆ ಪಕ್ಷಕ್ಕೆ ಮಧ್ಯದಲ್ಲಿ ಬಂದವರು ಮಧ್ಯೆ ಬಿಡುವ ಚಾಳಿ ಇದ್ದದ್ದೇ. ಇದರಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದರು.
ಪಕ್ಷದ ನಗರಾಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ದರೂ ಅಧಿಕಾರದ ಗದ್ದುಗೆ ಏರಲು ಅಡ್ಡದಾರಿ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಮತ್ತು ಬಿಜೆಪಿ. ನಮ್ಮ ಪಕ್ಷದ ಸದಸ್ಯರಿಗೂ ಆಮಿಷ ಒಡ್ಡಿ ತಮ್ಮತ್ತ ಸೆಳೆದುಕೊಂಡು ಅರಾಜಕತೆ ಸೃಷ್ಟಿಸಲು ಕೈಹಾಕಿದ್ರು. ಆದರೆ ಸದೃಡ ಆಡಳಿತಕ್ಕಾಗಿ ಪಕ್ಷೇತರ ಸದಸ್ಯೆ ಗಾಯತ್ರಿ ಅವರು, ಪಕ್ಷವನ್ನು ಕೊನೆಹಂತದಲ್ಲಿ ಬೆಂಬಲಿಸಿದ್ದರೇ ವಿನಃ ಯಾವುದೇ ಆಮಿಷಗಳಿಗೆ ಒಳಗಾಗಿ ಅಲ್ಲ. ಅವರಿಗೆ 15 ತಿಂಗಳ ಅವಧಿಯ ಉಪಾಧ್ಯಕ್ಷ ಸ್ಥಾನ ನೀಡುವುದಾಗಿಯೂ ಚಿಂತಿಸಲಾಗಿದೆ. ಅದೇ ರೀತಿ ಮತ್ತೊಬ್ಬ ಪಕ್ಷೇತರ ಸದಸ್ಯೆ ಭಾಗ್ಯ ಅವರಿಗೂ ಸೂಕ್ತ ಸ್ಥಾನಮಾನದ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದರು.
ಯಶೋಧಮ್ಮ ಪಕ್ಷದಲ್ಲಿಲ್ಲ: ಜೆಡಿಎಸ್ನಿಂದ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಯಶೋಧಮ್ಮ ಅವರು, ಪಕ್ಷ ಕೊಟ್ಟಿದ್ದ ವಿಪ್ ಉಲ್ಲಂಘಿಸಿದ್ದಾರೆ. ಈ ವಿಚಾರದಲ್ಲಿ ಕ್ಷಮೆಯ ಮಾತೇ ಇಲ್ಲ. ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಯಶೋಧಮ್ಮ ಈಗ ಜೆಡಿಎಸ್ನಲ್ಲಿ ಇಲ್ಲ ಎಂದು ಆರ್.ಗೋವಿಂದರಾಜು ಸ್ಪಷ್ಟಪಡಿಸಿದರು. ಪಕ್ಷದ ನಗರಸಭಾ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.