ಜೆಡಿಎಸ್ ತೆಕ್ಕೆಯಿಂದ ಒಂದೊಂದೇ ಸ್ಥಳೀಯ ಸಂಸ್ಥೆ ಕೈ ವಶ
ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭದ್ರಕೋಟೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ತೆಕ್ಕೆಯಿಂದ ಒಂದೊಂದೇ ಸ್ಥಳೀಯ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಪಾರುಪತ್ಯ ಸ್ಥಾಪನೆ ಮಾಡಿಕೊಳ್ಳುತ್ತಿದ್ದಾರೆ.
ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷಕ್ಕೆ ಆಗಿರುವ ಹಿನ್ನೆಡೆಯ ಬೆಳವಣಿಗೆಯು ಸಹಜವಾಗಿಯೇ ದಳಪತಿಗಳನ್ನು ಕಂಗೆಡಿಸಿದ್ದರೆ, ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ಡಿಕೆಎಸ್ ಸಹೋದರರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ಬೀಗುವಂತೆ ಮಾಡಿದೆ.
ಅಧಿಪತ್ಯ ಅಂತ್ಯ: ಕಳೆದೊಂದು ದಶಕದಿಂದ ರಾಮನಗರ ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಅಧಿಪತ್ಯವಿತ್ತು. ಈ ಬಾರಿ ಅದೆಲ್ಲವೂ ತಿರುವು ಮುರುವು ಆಗಿದೆ. ಕಳೆದ ಬಾರಿ ಜೆಡಿಎಸ್ ಮೈಲುಗೈ ಸಾಧಿಸಿದ್ದ ಎಲ್ಲ 4 ಪೌರ ಸಂಸ್ಥೆಗಳು ಇದೀಗ ಕಾಂಗ್ರೆಸ್ ತೆಕ್ಕೆಗೆ ಬಿದ್ದಿವೆ.
ಲೋಕಸಭೆ ಉಪ ಚುನಾವಣೆ ಸೋಲಿನ ಬೆನ್ನಲ್ಲೇ ರಾಮನಗರ ತಾ.ಪಂ.ನಲ್ಲಿ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳಲಾಗದೆ ಜೆಡಿಎಸ್ ಮುಖಭಂಗಕ್ಕೀಡಾಗಿತ್ತು. ಈಗ ಪೌರ ಸಂಸ್ಥೆಗಳಲ್ಲಿ ಸೋಲು ಮಾತ್ರವಲ್ಲದೆ ಸ್ವಪಕ್ಷದಲ್ಲಿ ಭಿನ್ನಮತ, ಬಂಡಾಯದಿಂದ ಜೆಡಿಎಸ್ ಮತ್ತಷ್ಟು ಹಿನ್ನೆಡೆ ಅನುಭವಿಸಿದೆ.
ಒಳೇಟಿನದ್ದೂ ಚಿಂತೆ: ರಾಮನಗರ ನಗರಸಭೆಯಲ್ಲಿ ಸತತ ಎರಡು ಅವಧಿಯಿಂದ ಜೆಡಿಎಸ್ ದರ್ಬಾರ್ ನಡೆದಿತ್ತು. ನಾನಾ ಅಕ್ರಮಗಳು, ನಾಗರಿಕ ಸಮಸ್ಯೆಗಳ ನಿವಾರಣೆಗೆ ಇಲ್ಲದ ಕಾಳಜಿ ಮತ್ತು ಅರಾಜಕತೆ ಮೂಲಕ ಚುನಾಯಿತ ಸದಸ್ಯರು ಈ ಬಾರಿ ಪಕ್ಷವನ್ನು ಅವಸಾನದ ಅಂಚಿಗೆ ದೂಡಿದರು.
ಈ ಪರಿಣಾಮ ಪ್ರಸಕ್ತ ಅವಧಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮುಗ್ಗರಿಸಿದರೆ, ಕಾಂಗ್ರೆಸ್ ಮೈಲುಗೈ ಸಾಧಿಸಿತು. ಇಷ್ಟಾಗಿಯೂ ಅಧಿಕಾರ ಗಿಟ್ಟಿಸಲು ಇದ್ದ ಅವಕಾಶವನ್ನು ಜೆಡಿಎಸ್ ಕೈಚೆಲ್ಲಿತು. ವರಿಷ್ಠರ ಸ್ಥಾನಗಳ ಚುನಾವಣೆಯಲ್ಲಿ ಪಕ್ಷದ ಇಬ್ಬರು ಸದಸ್ಯರ ಗೈರು ಜೆಡಿಎಸ್ಗೆ ಆಘಾತ ನೀಡಿದೆ.
ಮಾಗಡಿ ಕೋಟೆ ಛಿದ್ರ: ಹಿಂದಿನ ಅವಧಿಯಲ್ಲಿ ಮಾಗಡಿ ಪುರಸಭೆಯ 23 ಸ್ಥಾನಗಳಲ್ಲಿ 21 ಗೆದ್ದು, ಮೆರೆದಿದ್ದ ಜೆಡಿಎಸ್ ಪ್ರತಿಷ್ಠೆ ಮತ್ತು ಅದರ ಕೋಟೆಯನ್ನು ಕಾಂಗ್ರೆಸ್ ಈ ಬಾರಿ ಛಿದ್ರಗೊಳಿಸಿದೆ.
ಪುರಸಭೆಯಲ್ಲಿ ನಡೆಸಿದ ದುರಾಡಳಿತವೇ ಜೆಡಿಎಸ್ ಪಕ್ಷಕ್ಕೆ ಕಳೆದ ಪುರಸಭೆ, ವಿಧಾನಸಭೆ, ಲೋಕಸಭೆ ಉಪ ಚುನಾವಣೆಯಲ್ಲಿ ಹಿನ್ನೆಡೆ ಉಂಟು ಮಾಡಿದೆ. ಈ ಬಾರಿ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡಲಾಗದಷ್ಟು ಸ್ಥಾನಗಳಿಗೆ ಜೆಡಿಎಸ್ ಕುಸಿದಿದೆ.
ಮುಳುವಾದ ಭಿನ್ನಮತ: ಚನ್ನಪಟ್ಟಣ ನಗರಸಭೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಅಧಿಕಾರದ ಅವಕಾಶ ಈ ಹಿಂದಿನ ಚುನಾವಣೆಯಲ್ಲೇ ಜೆಡಿಎಸ್ ಪಕ್ಷಕ್ಕೆ ಒಲಿದಿತ್ತು. ಅಂತೆಯೇ ಕನಕಪುರದಲ್ಲೂ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಎರಡೂ ಕಡೆ ಆಪರೇಷನ್ ಹಸ್ತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.
ಆದರೆ, ಈ ಬಾರಿ ಚನ್ನಪಟ್ಟಣದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದರೂ ಒಗ್ಗಟ್ಟಿನ ಕೊರತೆಯಿಂದ ಅಧಿಕಾರ ವಂಚಿತವಾಗಿದೆ. ಇಷ್ಟಲ್ಲದೆ, ಚುನಾವಣೆಗೆ ಜೆಡಿಎಸ್ ಪಕ್ಷದ ಆರು ಸದಸ್ಯರ ಗೈರು ಆ ಕ್ಷೇತ್ರದಲ್ಲಿ ಮಿತಿ ಮೀರಿದ ಗುಂಪುಗಾರಿಕೆಗೆ ಕೈಗನ್ನಡಿಯಾಗಿದೆ. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಜೆಡಿಎಸ್ ತೊರೆಯಲು ನಿರ್ಧರಿಸಿರುವ ಬೆನ್ನಲ್ಲೇ ಕನಕಪುರ ಪುರಸಭೆಯಲ್ಲಿ ಕಾಂಗ್ರೆಸ್ಗೆ ಪ್ರತಿಸ್ಪರ್ಧಿ ಇಲ್ಲದಂತಾಗಿದೆ. ಆ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮೂಲಕ ಕಾಂಗ್ರೆಸ್ ಅಧಿಕಾರ ವಶಪಡಿಸಿಕೊಂಡಿದೆ.
ಜಿ.ಪಂ. ಮುಂದಿನ ಟಾರ್ಗೆಟ್
ಕಾಂಗ್ರೆಸ್ ಪಕ್ಷಕ್ಕೆ ರಾಮನಗರ ಜಿಲ್ಲೆಯಲ್ಲಿ ಮುಂದಿನ ಟಾರ್ಗೆಟ್ ಜಿಲ್ಲಾ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವುದಾಗಿದೆ. 20 ತಿಂಗಳ ಮೊದಲೆರಡು ಅವಧಿಯಲ್ಲೂ ಅಧಿಕಾರ ಹಂಚಿಕೆ ಸೂತ್ರ ಜಾರಿ ವೇಳೆ ಜೆಡಿಎಸ್ ಗೊಂದಲ, ಭಿನ್ನಮತ ಬಯಲಾಗಿದೆ. ಹಾಲಿ ಅಧ್ಯಕ್ಷ ಎಚ್.ಸಿ.ರಾಜು ಒಮ್ಮೆ ಸಲ್ಲಿಸಿದ್ದ ರಾಜಿನಾಮೆ ಕ್ರಮಬದ್ಧವಲ್ಲದ ಕಾರಣಕ್ಕೆ ತಿರಸ್ಕೃತಗೊಂಡರೆ, ಮತ್ತೆ ಸಲ್ಲಿಸಿದ ರಾಜಿನಾಮೆ ಹಿಂಪಡೆದಿರುವ ಕಾರಣ ಮೊದಲೇ ಒಡೆದ ಮನೆಯಾಗಿದ್ದ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ. ಕಡೆಯ 20 ತಿಂಗಳ ಅವಧಿಗೆ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೇಳಿ ಕೇಳಿ ಕಾಂಗ್ರೆಸ್ ಹವಾ ಜೋರಾಗಿದೆ. ಕೆಲ ಜೆಡಿಎಸ್ ಸದಸ್ಯರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸಿರುವುದು ಗುಟ್ಟಿನ ಸಂಗತಿಯಲ್ಲ.
ಮತ್ತೀಕೆರೆ ಜಯರಾಮ್