'ಪಕ್ಷ ದ್ರೋಹ ಮಾಡಿರುವುದು ನಾವಲ್ಲ'
ಚನ್ನಪಟ್ಟಣ: ನಗರಸಭಾ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷ ದ್ರೋಹ ಮಾಡಿರುವುದು ನಾವಲ್ಲ, ಸದಸ್ಯ ಜೆಸಿಬಿ ಲೋಕೇಶ್ ಮತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಉಜ್ಮಾಇಷ್ರತ್ ಪತಿ ಪರೀದ್ ಖಾನ್ ಘೋರಿ. ಇವರಿಬ್ಬರ ಉದ್ಧಟತನದಿಂದಾಗಿ ಜೆಡಿಎಸ್ ನಗರಸಭೆಯಲ್ಲಿ ಸೋತಿದೆ ಎಂದು ಚುನಾವಣೆಯ ವೇಳೆ ಗೈರುಹಾಜರಾಗಿದ್ದ 6 ಮಂದಿ ಸದಸ್ಯರು ಆರೋಪಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸದಸ್ಯರು, ಅಧಿಕಾರ ಹಿಡಿಯಲು ನಾವು ಅಗತ್ಯವಿರುವ ಎಲ್ಲಾ ಸಿದ್ಧತೆಯನ್ನು ಮಾಡಿ ಕೊಂಡಿದ್ದೆವು. ಕಾಂಗ್ರೆಸ್ನ ಇಬ್ಬರು ಸದಸ್ಯರು ಚುನಾವಣೆಯಲ್ಲಿ ಗೈರುಹಾಜರಾಗಲು ಒಪ್ಪಿದ್ದರು. ಆದರೆ ಲೋಕೇಶ್ ಮತ್ತು ಪರೀದ್ ನಮ್ಮ ಸದಸ್ಯರ ಮನಸ್ಸನ್ನು ಬದಲಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಕೊನೆಗಳಿಗೆಯಲ್ಲಿ ಕೈಚೆಲ್ಲ ಬೇಕಾಯಿತು ಎಂದರು.
ನಮ್ಮ ಪಕ್ಷದ ವರಿಷ್ಠರಾದ ಕುಮಾರಸ್ವಾಮಿ, ಜಮೀರ್, ರಾಮನಗರ ರಾಜಣ್ಣ ಕರೆಯಲಾಗಿದ್ದ ಸಭೆಗೆ ಇವರು ಹಾಜರಾಗಲಿಲ್ಲ, ಏಕಾಏಕಿ ಶಿಂಷಾಗೆ ತೆರಳಿ ನಾವು ಬರುವುದಿಲ್ಲ ಎಂದರು, ಬಾಯಿಗೆ ಬಂದಂತೆ ನಮ್ಮ ವರಿಷ್ಠರನ್ನು ಬೈದರು. ಇವರು ಯಾಕೆ ಹೀಗೆ ಮಾಡಿದರು ಎಂದು ತಿಳಿಯದಾಗಿದೆ, ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗುವುದಾಗಿ ಅವರು ನಮಗೆ ತಿಳಿಸಿದ್ದರು. ಅವರ ನಡವಳಿಗೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಮತ ಕೇಳಲೇ ಇಲ್ಲ: ನಗರಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉಜ್ಮಾಇಷ್ರತ್ ನಮ್ಮನ್ನು ಭೇಟಿ ಮಾಡಲೇ ಇಲ್ಲ, ನಮ್ಮ ಬಳಿ ಬಂದು ಮತಕೇಳಲೇ ಇಲ್ಲ, ನಾವು ನಗರಸಭೆಯಲ್ಲಿ ಸೋತು ಮರ್ಯಾದೆ ಕಳೆದು ಕೊಳ್ಳುವುದು ಯಾಕೆ ಎಂದು ಚುನಾವಣೆಗೆ ಗೈರಾದೆವು ಎಂದರು.
ಅಧ್ಯಕ್ಷರೇ ಹೇಳಿದ್ದರು: ಪಕ್ಷೇತರ ಸದಸ್ಯ ನಂದೀಶ್ ತಮ್ಮೊಂದಿಗಿದ್ದಾರೆ ಎಂದು ಅವರು ಹೇಳಿದ್ದರು,ನಂದೀಶ್ ಜೆಡಿಎಸ್ನೊಂದಿಗೆ ಬಂದರೆ ನೀವು ಹೋಗಿ, ಇಲ್ಲದಿದ್ದರೆ ಚುನಾವಣೆಗೆ ಹೋಗಬೇಡಿ ಎಂದು ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಇಬ್ಬರೂ ಹೇಳಿದ್ದರು. ಅವರ ಅಣತಿಯಂತೆ ನಾವು ಚುನಾವಣೆಯಲ್ಲಿ ಗೈರುಹಾಜರಾಗಿದ್ದೇವೆ. ನಮಗೆ ಯಾರೂ ವಿಪ್ ಜಾರಿ ಮಾಡಿರಲಿಲ್ಲ ಎಂದು ತಿಳಿಸಿದರು.
ನನಗೂ ಡಿ.ಕೆ.ಶಿವಕುಮಾರ್ಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ. ಕೆರೆಮೇಗಲ ದೊಡ್ಡಿಬಳಿಯ ನನ್ನ ಜಮೀನನ್ನು ಡಿ.ಕೆ.ಶಿವಕುಮಾರ್ ಕೊಂಡುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮಿಬ್ಬರ ನಡುವೆ ಕೇವಲ ವ್ಯವಹಾರಿಕ ಸಂಬಂಧ ಇದೆಯೇ ವಿನಾ ಇನ್ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ನಗರಸಭಾ ಸದಸ್ಯ ಜಬಿವುಲ್ಲಾಖಾನ್ ಘೋರಿ ತಿಳಿಸಿದರು.
ಈ ಹಿಂದೆ ನಾನೊಬ್ಬನೆ ಡಿ.ಕೆ.ಶಿವಕುಮಾರ್ ಬಳಿಗೆ ಹೋಗಿರಲಿಲ್ಲ. 11 ಮಂದಿ ನಗರಸಭಾ ಸದಸ್ಯರು ಅವರ ಬಳಿಗೆ ಹೋಗಿದ್ದೆವು, ನಗರಸಭೆ ಮೀಸಲಾತಿ ಗೊಂದಲವಾಗಿದ್ದರಿಂದ ಸರ್ಕಾರಕ್ಕೆ ಹೇಳಿ ಅದನ್ನು ಬಗೆಹರಿಸಿ ಕೊಳ್ಳಲು ಅವರ ಬಳಿ ಹೋಗಿದ್ದೆವು. ಈ ಸಂಗತಿಯನ್ನು ಕುಮಾರಸ್ವಾಮಿಗೆ ತಿಳಿಸೇ ನಾವು ಹೋಗಿದ್ದೆವು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠ್ಟಿಯಲ್ಲಿ ಜೆಡಿಎಸ್ ನಗರಸಭಾ ಸದಸ್ಯರಾದ ಉಮಾಶಂಕರ್, ರಮೇಶ್ಬಾಬು, ಮಧು, ಲಕ್ಷ್ಮಮ್ಮ, ಕಮರ್ ನಿಜಾಮಿ ಪತಿ ಅಕ್ರಂ ಉಪಸ್ಥಿತರಿದ್ದರು.