'ಮಹಾಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್'
ರಾಮನಗರ: ಯುಪಿಎ ಸರ್ಕಾರದ ಕೆಲ ಸಚಿವರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಇದು ಲೋಕಸಭೆ ಮಹಾಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿರುವುದರ ಸಂಕೇತ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ. ಮುನಿರಾಜು ಹೇಳಿದರು.
ನಗರದ ವಕೀಲರ ಸಂಘಕ್ಕೆ ಸೋಮವಾರ ಭೇಟಿ ನೀಡಿ ವಕೀಲ ಸಮುದಾಯದ ಬೆಂಬಲ ಯಾಚಿಸಿ ಮಾತನಾಡಿದ ಅವರು, ಬಡತನ ಮತ್ತು ಭ್ರಷ್ಟಾಚಾರ ರಹಿತ, ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಬೆಂಬಲಿಸುವಂತೆ ಮನವಿ ಮಾಡಿದರು. ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿಸಲು ಬಿಜೆಪಿಗೆ ಒಂದೊಂದು ಕ್ಷೇತ್ರದ ಗೆಲವೂ ಮುಖ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸುವ ಮೂಲಕ ದೇಶಕ್ಕೆ ಮೋದಿ ಸಾರಥ್ಯ ಸಿಗುವಂತಾಗುವಲ್ಲಿ ಪಾತ್ರ ವಹಿಸಬೇಕು ಎಂದರು.
ಕಾಂಗ್ರೆಸ್ ವೈಫಲ್ಯ: ಕಳೆದ 10 ವರ್ಷದಿಂದ ದೇಶ ಆಳುತ್ತಿರುವ ಕಾಂಗ್ರೆಸ್ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ. ಈ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀದ್ದಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಎಂದು ಮುನಿರಾಜು ಆರೋಪಿಸಿದರು.
ಈ ಕ್ಷೇತ್ರದಾದ್ಯಂತ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು, ನೆನಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿಗೆ ಚಾಲನೆ, ಗುಣಮಟ್ಟದ ಶಿಕ್ಷಣ,
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಪ್ರಾರಂಭ ಸಹಿತ ಹಲವು ಯೋಜನೆಗಳ ಅನುಷ್ಠಾನ ತಮ್ಮ ಗುರಿಯಾಗಿವೆ ಎಂದರು.
ಸರ್ವತೋಮುಖ ಅಭಿವೃದ್ಧಿ: ಬೆಂಗಳೂರಿಗೆ ಅನತಿ ದೂರದಲ್ಲಿರುವ ರಾಮನಗರ ಜಿಲ್ಲೆಯ ಸರ್ವತೋಮುಖ
ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು, ಬೆಂಗಳೂರು ಗ್ರಾಮಾಂತರವನ್ನು ಮಾದರಿ ಕ್ಷೇತ್ರವನ್ನಾಗಿಸುವುಕ್ಕೆ ನನ್ನೊಂದಿಗೆ ಕೈಜೋಡಿಸಬೇಕು ಎಂದು ಅವರು ಕೋರಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಉಪಾಧ್ಯಕ್ಷ ಚಿಕ್ಕಪ್ಪಾಜಿ, ಖಜಾಂಚಿ ಟಿ.ಎಂ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ವಕೀಲರಾದ ಚನ್ನಬಸವಾರಾಧ್ಯ, ಆರ್.ವಿ.ದೇವರಾಜ್, ಶ್ರೀಹರ್ಷ, ಸುಮನ್, ಎಂ.ಎಲ್.ವೆಂಕಟೇಶ್, ಶಶಿಶೇಖರ್, ವಿನೋದ್ ಕುಮಾರ್, ಟಿ.ವರದರಾಜು ಮತ್ತಿತರರು ಹಾಜರಿದ್ದರು.