ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ ನಗರಸಭೆ, ಕನಕಪುರ, ಮಾಗಡಿ ಪುರಸಭೆ 'ಕೈ' ವಶ

Mainashree
Updated On : 18 Mar 2014, 12:58 pm

ರಾಮನಗರ: ಮೊನ್ನೆಯಷ್ಟೇ ಚನ್ನಪಟ್ಟಣ ನಗರಸಭೆ ಚುಕ್ಕಾಣಿ ಹಿಡಿದು ಬೀಗಿದ್ದ ಆಡಳಿತಾರೂಢ ಕಾಂಗ್ರೆಸ್ ಸೋಮವಾರ ನಡೆದ ರಾಮನಗರ ನಗರಸಭೆ, ಕನಕಪುರ ಮತ್ತು ಮಾಗಡಿ ಪುರಸಭೆಗಳ ವರಿಷ್ಠರ ಸ್ಥಾನಗಳ ಚುನಾವಣೆಯಲ್ಲೂ ಜಯಭೇರಿ ಬಾರಿಸಿದೆ.  ರಾಮನಗರ ನಗರಸಭೆ ಅಧ್ಯಕ್ಷರಾಗಿ ಮಹಮದ್ ಆರಿಫ್ ಖುರೇಷಿ ಮತ್ತು ಉಪಾಧ್ಯಕ್ಷರಾಗಿ ನಾಗೇಶ್, ಮಾಗಡಿ ಪುರಸಭೆ ಅಧ್ಯಕ್ಷರಾಗಿ ಫಹೀಮುನ್ನಿಸಾ ಹಾಗೂ ಉಪಾಧ್ಯಕ್ಷರಾಗಿ ಎಚ್.ಆರ್.ರಾಮಚಂದ್ರ, ಕನಕಪುರ ಪುರಸಭೆ ಅಧ್ಯಕ್ಷರಾಗಿ ರಾಮಚಂದ್ರು ಮತ್ತು ಉಪಾಧ್ಯಕ್ಷರಾಗಿ ಹೇಮಾ ಆಯ್ಕೆಯಾಗಿದ್ದಾರೆ.
ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿತ್ತಾದರೂ ಬಹುಮತವಿರಲಿಲ್ಲ. ತೀವ್ರ ಕಸರತ್ತಿನಿಂದ ಆಡಳಿತ ಹಿಡಿದಿದೆ. ಕನಕಪುರ ಮತ್ತು ಮಾಗಡಿ ಪುರಸಭೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿದ್ದ ಕಾಂಗ್ರೆಸ್ ಅನಾಯಾಸ ಗೆಲವು ಸಾಧಿಸಿದೆ.
ಕಾಂಗ್ರೆಸ್ ಕೈಚಳಕ: ಪೌರ ಸಂಸ್ಥೆಗಳ ವರಿಷ್ಠರ ಆಯ್ಕೆ ಮತ್ತು ಅವಿಶ್ವಾಸ ಮಂಡನೆ ಪ್ರಕ್ರಿಯೆಯಲ್ಲಿ ಆಯಾ ವ್ಯಾಪ್ತಿ ಸಂಸದ, ಶಾಸಕರೂ ಮತದಾನ ಹಕ್ಕುಳ್ಳವರಾಗಿರುತ್ತಾರೆ. ಅಧಿಕಾರ ಹಿಡಿಯುವುದಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರನ್ನು ಇಲ್ಲಿನ ಮತದಾರರಾಗುವಂತೆ ಮಾಡಿತ್ತು. ಇಷ್ಟಲ್ಲದೆ, ಬಿಜೆಪಿಯ ಇಬ್ಬರು ಸದಸ್ಯರನ್ನು ತನ್ನತ್ತ ಸೆಳೆಯುವಲ್ಲಿಯೂ ಯಶಸ್ವಿಯಾದ ಕಾಂಗ್ರೆಸ್ ಮುಖಂಡರು ಪ್ರತಿಪಕ್ಷ ಜೆಡಿಎಸ್‌ನ ಇಬ್ಬರು ಸದಸ್ಯರು ಗೈರು ಹಾಜರಾಗುವಂತೆಯೂ ನೋಡಿಕೊಳ್ಳುವ ಮೂಲಕ ತನ್ನ ಗೆಲುವಿನ ಹಾದಿಯನ್ನು ಸುಗಮವಾಗಿಸಿಕೊಂಡು, ಕೈಚಳಕ ತೋರಿಸಿದ್ದಾರೆ.   
ಕಗ್ಗಂಟಾಗಿದ್ದ ಆಯ್ಕೆ:  ರಾಮನಗರ ನಗರಸಭೆ ಚುಕ್ಕಾಣಿ ಹಿಡಿಯುವುದು ಖಚಿತಗೊಂಡು, ಖುಷಿಯಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿ ಪರಿಣಮಿಸಿತ್ತು. ಹಗ್ಗ ಜಗ್ಗಾಟದ ನಂತರ ಅಧಿಕಾರ ಹಂಚಿಕೆ ಸೂತ್ರ ರೂಪಿಸಿ ಅತೃಪ್ತರನ್ನು ಸಂತೈಸಿದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚೇತನ್ ಕುಮಾರ್ ಹೆಸರು ಮುಂಚೂಣಿಗೆ ಬರುತ್ತಿದ್ದಂತೆಯೇ ಅಲ್ಪ ಸಂಖ್ಯಾತ ಮುಸ್ಲಿಂ ಕೋಮಿನ ಸದಸ್ಯರು ಒಗ್ಗೂಡಿ, ಮುಖಂಡರಿಗೆ ಟಾಂಗ್ ನೀಡಿದರು. ಬಳಿಕ ಮತ್ತೊಮ್ಮೆ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿ, ಆರೀಫ್ ಖುರೇಷಿಗೆ ಮಣೆ ಹಾಕಲಾಯಿತು.
ಭುಗಿಲೆದ್ದ ಅಸಮಾಧಾನ: ಆರಿಫ್ ಖುರೇಷಿ ಅವರನ್ನು ಬೆಂಬಲಿಸಿದರೆನ್ನುವ ಕಾರಣಕ್ಕೆ ಕಾಂಗ್ರೆಸ್ ಸದಸ್ಯೆ ಮಂಗಳ ಅವರ ಪತಿ ಶಂಭೂಗೌಡ ಅವರನ್ನು ಸ್ವಪಕ್ಷೀಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ವಿಷಯವಾಗಿ  ನಗರಸಭೆ ಭವನದ ಹೊರಗೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು.
ತಮಗೆ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಚೇತನ್ ಕುಮಾರ್, ಲೋಕೇಶಬಾಬು, ಡಿ.ಕೆ.ಶಿವಕುಮಾರ್ ಈ ಮೂವರು ಸದಸ್ಯರು ಮತದಾನ ಮುಗಿದ ಬೆನ್ನಲ್ಲೇ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸುವ ಕಾರ್ಯಕ್ರಮದಿಂದ ದಿಢೀರ್ ಹೊರ ನಡೆದು, ಅತೃಪ್ತಿ ಹೊರಗೆಡವಿದರು.

ಒಂಬತ್ತು ಮತಗಳಿಂದ ಗೆಲುವು
ರಾಮನಗರ: ಇಲ್ಲಿನ ನಗರಸಭೆ ವರಿಷ್ಠರ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 9 ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಹಮದ್ ಆರಿಫ್ ಖುರೇಷಿ ಮತ್ತು ಹಿಂದುಳಿದ ಅ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ನಾಗೇಶ್ ತಲಾ 20 ಮತಗಳನ್ನು ಪಡೆದು ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಪಕ್ಷೇತರ ಸಿ.ಎಂ.ರಫೀಕ್ ಅಹಮದ್ ಮತ್ತು ಉಪಾಧ್ಯಕ್ಷ ಸ್ಥಾನದ ಜೆಡಿಎಸ್ ಅಭ್ಯರ್ಥಿ ಅಕ್ರಂ ಷರೀಫ್ ತಲಾ 11 ಮತಗಳನ್ನು ಗಳಿಸಿದರು.  ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎಚ್.ಡಿ.ಕುಮಾರಸ್ವಾಮಿ, ಅಪ್ಸರ್ ಆಗಾ, ಕೆ.ಗೋವಿಂದರಾಜು, 31 ಚುನಾಯಿತ ಸದಸ್ಯರು ಸಹಿತ ಒಟ್ಟಾರೆ 35 ಮತದಾರರಿದ್ದರು. ಈ ಪೈಕಿ 16 ಚುನಾಯಿತ ಸದಸ್ಯರು, ಬಿಜೆಪಿಯ ಇಬ್ಬರು ಸದಸ್ಯರು, ಸಂಸದ ಸುರೇಶ್, ಗೋವಿಂದರಾಜು ಮತಗಳೊಂದಿಗೆ ತನ್ನ ಸಂಖ್ಯೆಯನ್ನು ಕಾಂಗ್ರೆಸ್ 20ಕ್ಕೆ ಹೆಚ್ಚಿಸಿಕೊಂಡಿತು.  ಶಾಸಕರಾದ ಕುಮಾರಸ್ವಾಮಿ, ಅಪ್ಸರ್ ಆಗಾ, ಇಬ್ಬರು ಚುನಾಯಿತ ಸದಸ್ಯರ ಗೈರುವಿನಿಂದ ಜೆಡಿಎಸ್ ಪಾಲಿಗೆ 4 ಮತಗಳು ಕಡಿಮೆಯಾದವು. ಚುನಾಯಿತ 10 ಸದಸ್ಯರು ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಸೇರಿದಂತೆ ಜೆಡಿಎಸ್ ಬಣದ ಬಲ 11ಕ್ಕೆ ಕುಸಿದಿದೆ. ಈ ಚುನಾವಣೆಯೊಂದಿಗೆ ಜೆಡಿಎಸ್ ಒಡಕು ಕೂಡ ಬಹಿರಂಗವಾಗಿದೆ.
ಮಾಗಡಿ: ಭರ್ಜರಿ ಗೆಲವು
ಮಾಗಡಿ: ಈ ಪುರಸಭೆಯಲ್ಲೂ ಕಾಂಗ್ರೆಸ್ ದೊಡ್ಡ ಅಂತರದ ಗೆಲವು ಸಾಧಿಸಿದೆ. ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಫಹಿಮುನ್ನಿಸಾ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಆರ್.ಮಂಜುನಾಥ್ ಆಯ್ಕೆಯಾಗಿದ್ದಾರೆ.  ಕಾಂಗ್ರೆಸ್‌ನ ಇಬ್ಬರೂ ವಿಜೇತರು ತಲಾ 16 ಮತಗಳನ್ನು ಗಳಿಸಿದ್ದು, ಜೆಡಿಎಸ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಜರಾಬಿ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜು ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು.  23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗಳಿಸಿತ್ತು. ಸಂಸದ ಸುರೇಶ್ ಮತವೂ ಸೇರಿ ಆ ಪಕ್ಷದ ಸಂಖ್ಯಾ ಬಲ 16ಕ್ಕೆ ಏರಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಗೈರು ಹಾಜರಾಗುವ ಮೂಲಕ ತಮ್ಮ ಪಕ್ಷದ ಸೋಲಿನ ಅಂತರವನ್ನು 1 ಮತದಷ್ಟು ಹೆಚ್ಚಿಸಿಕೊಂಡಿದ್ದಾರೆ.

ಕನಕಪುರ: ಅವಿರೋಧ ಆಯ್ಕೆ
ಕನಕಪುರ: ಈ ಪುರಸಭೆಯಲ್ಲಿ ಭಾರಿ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ವರಿಷ್ಠರ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲದಂತಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಉಭಯ ಸ್ಥಾನಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.  ಹಿಂದುಳಿದ ಅ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯೂ  ಆದ ತಹಸೀಲ್ದಾರ್ ಘೋಷಿಸಿದರು.  ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲವು ನಿರೀಕ್ಷಿತವಾಗಿದ್ದರಿಂದ ಸಂಸದ ಡಿ.ಕೆ.ಸುರೇಶ್ ಮತ್ತು ಸ್ಥಳೀಯ ಶಾಸಕರೂ ಆದ ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ.  

ಎಲ್ಲೆಡೆ ಕಾಂಗ್ರೆಸ್ ವಿಜಯೋತ್ಸವ
ರಾಮನಗರ, ಕನಕಪುರ ಮತ್ತು ಮಾಗಡಿ ಈ ಮೂರೂ ಕಡೆ ಪೌರ ಸಂಸ್ಥೆಗಳ ಚುನಾವಣೆ ಫಲಿತಾಂಶ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಜತೆಗೆ ನೆಚ್ಚಿನ ನಾಯಕರ ಪರ ಜಯಘೋಷದೊಂದಿಗೆ ವಿಜಯೋತ್ಸವ ಆಚರಿಸಿದರು.  ಕನಕಪುರದಲ್ಲಿ ಮಾಜಿ ಶಾಸಕ ಎಸ್.ರವಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರೆ, ಮಾಗಡಿಯಲ್ಲಿ ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಸಾರಥ್ಯ ವಹಿಸಿದ್ದರು. ರಾಮನಗರದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸಂಸದ ಸುರೇಶ್, ಮುಖಂಡರಾದ ಪಿ.ನಾಗರಾಜು, ಮರಿದೇವರು, ಕೆ.ರಮೇಶ್ ಮತ್ತಿತರರು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement