ಅದ್ಧೂರಿ ಬೆಟ್ಟದರಸಮ್ಮನ ಜಾತ್ರೆ
ಹಲಗೂರು: ಹೋಬಳಿ ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದರಸಮ್ಮನ ದೊಡ್ಡ ಜಾತ್ರಾಮಹೋತ್ಸವ ಅಪಾರ ಭಕ್ತಾದಿಗಳ ನಡುವೆ ನಡೆಯಿತು.
ಜಾತ್ರೆ ಮಾ.12ರಂದು ಪ್ರಾರಂಭವಾಗಿ 18ರ ಮಂಗಳವಾರ ಗುಂಡಾಪುರದ ಹೃದಯ ಭಾಗದಲ್ಲಿರುವ ಕರಗದ ಮನೆಯಲ್ಲಿ ಬೆಟ್ಟದರಸಮ್ಮನ ಕರಗಕ್ಕೆ ಚಿನ್ನಾಭರಣಗಳಿಂದ ಅಲಂಕರಿಸಿ ಪದ್ಧತಿಯಂತೆ ಹೆಬ್ಬಾರೆಯನ್ನು ಹೊತ್ತು ಮನೆಗಳಿಗೆ ಹೋದಾಗ ಮನೆಯವರು ಹೆಬ್ಬಾರೆಗೆ ಪೂಜೆ ಸಲ್ಲಿಸಿ ಅಚ್ಚಂದ ನೀಡಿದ್ದಾರೆ.
ದೇವಿಗೆ ಪ್ರಿಯವಾದ ಪರದೇಶಿ ಕುಣಿತದವರು ಬಂದನಂತರವೇ ಕರಗದ ಮೆರವಣಿಗೆ ಹೊರಡುವ ಪದ್ಧತಿಯಿದೆ. ಕರಗದ ಮನೆ ಸಮೀಪ ಬಂದಾಗ ಕರಗಕ್ಕೆ ಅರ್ಚಕರು ಪೂಜೆ ನೆರವೇರಿಸಿದರು. ನಂತರ ಮಡಿವಾಳ ಹಾಸಿದ ಮಡಿಯ ಮೇಲೆ ಕರಗ ಹೊತ್ತು ಅರ್ಚಕರು ನಡೆದಾಗ ಜೋಡಿ ಬಸವ ಕಳಸ ಹೊತ್ತ ಮುತ್ತೈದೆಯರು, ಹರಕೆ ಹೊತ್ತ ಬಾಯಿ ಬೀಗದವರು ಹಿಂಬಾಲಿಸಿ ದೇವರ ಕರಗಕ್ಕೆ ಛತ್ರಿ ಹಿಡಿದು ಚಾಮರ ಬಿಸುತ್ತಾ ಸಾಗಿದ ಮೆರವಣಿಗೆಯನ್ನು ನೆರೆದಿದ್ದ ಅಪಾರ ಜನಸ್ತೋಮ ದರ್ಶನ ಪಡೆದು ಪುನೀತರಾದರು.
ಕರಗವು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನಕ್ಕೆ ಬಂದಾಗ ಸಂಜೆ 6 ಘಂಟೆ ಸಮೀಪಿಸಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದರು. ಮತ್ತೆ ರಾತ್ರಿ ದೇವರ ಕರಗವನ್ನು ಹೊತ್ತು ಬೆಟ್ಟದ ತಪ್ಪಲಿನಿಂದ ಮೆರವಣಿಗೆಯಲ್ಲಿ ಗುಂಡಾಪುರ ಗ್ರಾಮಕ್ಕೆ ಬಂದಾಗ ಮುತ್ತೈದೆಯರು ಆರತಿ ಎತ್ತಿ ಪೂಜೆ ಸಲ್ಲಿಸಿದರು.
ಹಲವು ಗ್ರಾಮಗಳಿಂದ ಹಸುಗಳನ್ನು ಕರೆ ತಂದು ಊರ್ಜಿ ಹಾಡಿಸುವುದು ಒಂದು ವಿಶೇಷವಾಗಿತ್ತು. ಒಂದು ವಾರ ನಡೆದ ಜಾತ್ರೆಯಲ್ಲಿ ದಿನನಿತ್ಯ ನಡೆಯುವ ಪೂಜಾಕಾರ್ಯಗಳಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುತ್ತಿದ್ದರು. ತಟ್ಟೆ ಪೂಜೆ ದಿನ ನೂರಾರು ಭಕ್ತಾಧಿಗಳು ಸೇರಿದ್ದರು. ಯಾವುದೇ ಗಲಾಟೆಯಾಗದಂತೆ ಪೊಲೀಸ್ ಬಂದೋಬಸ್ತ್
ಮಾಡಲಾಗಿತ್ತು. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನೀರಿನ ತೊಂದರೆಯಾಗದಂತೆ ಟ್ಯಾಂಕರ್ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೆ ಮುಗಿದ ನಂತರವೂ 7 ದಿನಗಳ ಕಾಲ ಗುಂಡಾಪುರ ಸೇರಿದಂತೆ ಹೊನ್ನಿಗನಹಳ್ಳಿ ಕೆಂಪಯ್ಯನದೊಡ್ಡಿ, ಬಸಾವುರ, ನಂದೀಪುರ, ದಳವಾಯಿಕೋಡಿಹಳ್ಳಿ, ಹಗಾದೂರು ದೇವಿರಳ್ಳಿ ಗ್ರಾಮಗಳಲ್ಲಿ ಮಾಂಸಹಾರ ಊಟ ಮಾಡುವಂತಿಲ್ಲ. ಎಲ್ಲಾ ವರ್ಗದವರು ಶ್ರದ್ಧಾ ಭಕ್ತಿಯಿಂದ ಈ ಜಾತ್ರಾಮಹೋತ್ಸವವನ್ನು ಆಚರಿಸುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರಸ್ವಾಮಿಯವರ ಮಾರ್ಗದರ್ಶನದಲ್ಲಿ ಹಲಗೂರು ಠಾಣೆಯ ಸಬ್ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ನೇಮಿಸಲಾಗಿತ್ತು.