ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ; ಇಂದು ಅಧಿಸೂಚನೆ

Mainashree
Updated On : 19 Mar 2014, 12:44 pm

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಮನಗರ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಮಾ.19 ರಂದು ಅಧಿಸೂಚನೆ ಹೊರಡಿಸಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆಯೂ ಪ್ರಾರಂಭಗೊಳ್ಳಲಿದೆ.
ಜಿದ್ದಾಜಿದ್ದಿನ ಅಖಾಡವಾದ ಈ ಕ್ಷೇತ್ರಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿಪಡಿಸಿಕೊಂಡ ಅಭ್ಯರ್ಥಿಗಳು, ಈಗಾಗಲೇ ಪ್ರಚಾರಕ್ಕೆ ಇಳಿದಿದ್ದಾರೆ.   ಕಾಂಗ್ರೆಸ್ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜಾಥಾ ನಡೆಸಿದ್ದರೆ, ಬಿಜೆಪಿಯು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸುತ್ತಿದೆ. ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರ ಸಭೆ ಮೂಲಕ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ.  ಅಧಿಸೂಚನೆ ಪ್ರಕಟದ ಬಳಿಕ ಕ್ಷೇತ್ರದ ಚುನಾವಣಾ ಕಣ ರಂಗೇರಲಿದೆ. ಮೂರು ಪ್ರಮುಖ ಪಕ್ಷಗಳಿಗೂ ಕ್ಷೇತ್ರದಲ್ಲಿ ತನ್ನದೇ ಆದ ಮತ ಬ್ಯಾಂಕ್, ಮುಖಂಡರು ಮತ್ತು ಕಾರ್ಯಕರ್ತರ ಪಡೆ ಇದ್ದು, ಪ್ರಚಾರ ಕಾರ್ಯ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ.
2,497 ಮತಗಟ್ಟೆಗಳು: ರಾಜ್ಯದ ಅತಿ ದೊಡ್ಡ ಮತ್ತು ಹೆಚ್ಚು ಮತದಾರರನ್ನು ಹೊಂದಿದ ಲೋಕಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ 2,497 ಮತಗಟ್ಟೆಗಳನ್ನು ಗುರ್ತಿಸಲಾಗಿದೆ. ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳ ತಪಾಸಣೆಗೊಳಪಡಿಸಲಾಗಿದೆ.  ಚುನಾವಣಾ ಅಕ್ರಮ ತಡೆ, ಮದ್ಯ ಸರಬರಾಜು ಮತ್ತು ದಾಸ್ತಾನು ಸಂಬಂಧ ಕಂಟ್ರೋಲ್‌ರೂಂ, ವಿಚಕ್ಷಣ ದಳಗಳು, ಖರ್ಚುವೆಚ್ಚ ತಪಾಸಣೆ, ಮಾದರಿ ನೀತಿ ಸಂಹಿತೆ ಪಾಲನೆಗೆ ಅಧಿಕಾರಿಗಳು ಮತ್ತು ತಂಡಗಳನ್ನು ಚುನಾವಣಾಧಿಕಾರಿ ನೇಮಕ ಮಾಡಿದ್ದಾರೆ.   
ಚುನಾವಣೆ ಪ್ರಕ್ರಿಯೆ: ಮಾ.19 ರಿಂದ ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ, ಮಾ.26ರವರೆಗೂ ಪ್ರತಿ ನಿತ್ಯ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು.
ನಾಮಪತ್ರ ಹಿಂಪಡೆಯಲು ಮಾ.29ರವರೆಗೆ ಕಾಲಾವಕಾಶವಿರುತ್ತದೆ. ಅಂದು ಮಧ್ಯಾಹ್ನ 3ಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಮಾ.17ಕ್ಕೆ ಮತದಾನ, ಮೇ 16ಕ್ಕೆ ಮತಗಳ ಎಣಿಕೆ ನಡೆಯಲಿದೆ.
ಕಣ್ಗಾವಲು ಸಮಿತಿ ರಚನೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಕಟಗೊಳ್ಳುವ ಎಲ್ಲಾ ಬಗೆಯ ಜಾಹೀರಾತುಗಳನ್ನು ಪ್ರಮಾಣೀಕರಿಸಲು ಮತ್ತು ಮಾಧ್ಯಮ ಸಂಬಂಧಿತ ವಿಷಛಯಗಳ ಕರ್ತವ್ಯ ನಿರ್ವಹಣೆ ಮೇಲೆ ನಿಗಾ ವಹಿಸಲು ಕಣ್ಗಾವಲು ಸಮಿತಿ ರಚಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ವಿಶ್ವನಾಥ್ ತಿಳಿಸಿದ್ದಾರೆ.  ಖಾಸಗಿ ಸುದ್ದಿವಾಹಿನಿ, ದೂರದರ್ಶನ, ರೇಡಿಯೋ, ಕೇಬಲ್ ಟಿವಿಗಳಲ್ಲಿ ಚುನಾವಣೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡುವುದಕ್ಕೆ ಕಣ್ಗಾವಲು ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಅನುಮೋದನೆ ಅಗತ್ಯವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲಾ ಜಾಹೀರಾತುಗಳನ್ನು ಸಮಿತಿಯು ಗಮನಿಸಿ, ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡುವರು. ಕರಪತ್ರ, ಭಿತ್ತಿಪತ್ರ ಸಹಿತ ಪ್ರಚಾರ ಸಾಮಗ್ರಿಗಳಲ್ಲಿ  ಮುದ್ರಕರು, ಪ್ರಕಾಶಕರ ಹೆಸರು, ವಿಳಾಸ ನಮೂದಿಸಬೇಕು ಎಂದು ಅವರು ಆದೇಶಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement