ಸಮಾನ ಅವಕಾಶ ನಾರಿಯ ಜನ್ಮಸಿದ್ಧ ಹಕ್ಕು: ಡಾ.ವಸುಂಧರಾ
ದೊಡ್ಡಬಳ್ಳಾಪುರ: ಮಹಿಳಾ ಪರ ಚಿಂತನೆಗಳು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಾರದೇ ಹೋಗುತ್ತಿರುವುದು ಆತಂಕಕಾರಿ. ಸಮಾನ ಅವಕಾಶ ಪುರುಷ ಪ್ರಧಾನ ವ್ಯವಸ್ಥೆ ಕೊಡುವ ಭಿಕ್ಷೆಯಲ್ಲ. ಅದು ಮಹಿಳೆಯ ಜನ್ಮಸಿದ್ಧ ಹಕ್ಕು ಎಂದು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಮೌಢ್ಯ ಬದಿಗಿಟ್ಟು, ಬೌದ್ಧಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆಡಂಬರ ಕಡಿಮೆ ಮಾಡಿದ್ದಾರೆ ಎಂಬ ಸಮಾಧಾನದ ಜೊತೆಗೆ ಜ್ಯೋತಿಷ್ಯ ಇತ್ಯಾದಿ ಮೌಢ್ಯದ ಬೆನ್ನುಬಿದ್ದಿದ್ದಾರೆ ಎಂಬ ಆತಂಕವೂ ಕಾಡುತ್ತಿದೆ ಎಂದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ಜಾಗತಿಕ ಬದಲಾವಣೆಗೆ ಕಾರಣವಾಗಿರುವ ಕಾಲಘಟ್ಟದಲ್ಲಿ ಮಹಿಳೆಯರು ವಿವೇಚನೆ ಬೆಳೆಸಿಕೊಳ್ಳಬೇಕು. ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಬೆಳೆಸಬೇಕು. ಚುನಾವಣೆ ಸಂದರ್ಭದಲ್ಲಿ ಯೋಗ್ಯರಾದವರಿಗೆ ಮತ ನೀಡುವುದನ್ನು ಮಹಿಳೆಯರು ಮಾಡಬೇಕಾಗಿದೆ. ದೊಡ್ಡಬಳ್ಳಾಪುರದ ಸ್ಥಳೀಯ ಸಾಹಿತಿಗಳಾದ ಅನುಪಮ ನಿರಂಜನ, ಭೀಮಕ್ಕ ಮತ್ತಿತರರು ಮಹಿಳೆಯರ ಔನತ್ಯಕ್ಕೆ ಶ್ರಮಿಸಿದ್ದಾರೆ ಎಂದರು.
ಸಮುದಾಯ ಸಂಘಟನೆ ಕಾರ್ಯದರ್ಶಿ ಕೆ.ಎಸ್.ವಿಮಲಾ ಮಾತನಾಡಿ, ಜಾತಿ-ಧರ್ಮವನ್ನು ಬಿಟ್ಟು ನಾವೆಲ್ಲ ಮಹಿಳೆಯರು, ನಾವೂ ಮನುಷ್ಯರು ಎಂದು ಅರಿವು ಮೂಡಿಸಲು 104 ವರ್ಷಗಳ ಹಿಂದೆ ನಡೆದ ಹೋರಾಟ ಮಹಿಳಾ ದಿನಾಚರಣೆಯಾಗಿ ಆಚರಿಸಲ್ಪಡುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದೆ, ದ್ವೇಷ ಮತ್ತು ಅಸೂಯೆ ಹೆಚ್ಚುತ್ತಿರುವ ಕಾಲದಲ್ಲಿ ಮಹಿಳಾಪರ ನಿಲುವುಗಳು ಬದಲಾಗಬೇಕಿದೆ. ಮಹಿಳಾ ಮೀಸಲಾತಿ ಸ್ಥಳೀಯ ಹಂತದವರೆಗೆ ಮಾತ್ರ ಸೀಮಿತವಾಗಿದೆ. ಶಾಸನ ಸಭೆಗಳಲ್ಲಿ ಮೀಸಲಾತಿ ಪಡೆಯಲು ಹೋರಾಟ ಇಂದಿಗೂ ಅನಿವಾರ್ಯ ಎಂದರು.
ಬಿಜಿವಿಎಸ್ ರಾಜ್ಯ ಸಂಚಾಲಕಿ ಎನ್.ಪ್ರಭಾ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರ ನೋವುಗಳ ಕುರಿತು ಚಿಂತನೆಯಾಗಬೇಕು. ಭ್ರೂಣದಲ್ಲಿಯೇ ಹೆಣ್ಣನ್ನು ಚಿವುಟಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಕುಟುಂಬಗಳಲ್ಲಿ ಸಾಮರಸ್ಯ ಕಡಿಮೆಯಾಗುತ್ತಿದೆ. ಸಾಮಾಜಿಕ ಸಂಬಂಧಗಳು ಹದಗೆಡುತ್ತಿರುವ ಸಂದರ್ಭದಲ್ಲಿ ಮಹಿಳೆಯರ ಹೊಣೆಗಾರಿಕೆ ಹೆಚ್ಚಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಕೆ.ಸುಲೋಚಮ್ಮ, ಕಮಲಾದೇವ ಚಟ್ಟೋಪಾಧ್ಯಾಯ ಮಹಿಳಾ ಚಿಂತನಾ ವೇದಿಕೆಯ ಸಂಯೋಜಕಿ ಕೆ.ಎಸ್.ಪ್ರಭಾ, ಕೊಂಗಾಡಿಯಪ್ಪ ಕಾಲೇಜು ಎನ್ಎಸ್ಎಸ್ ಅಧಿಕಾರಿ ಚಂದ್ರಪ್ಪ, ಮಹಿಳಾ ಸಮಾಜ ಅಧ್ಯಕ್ಷೆ ಎಲ್.ಸಿ.ದೇವಕಿ, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್, ರಾಜ್ಯ ಅಂಗನವಾಡಿ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಗ್ರಾಮೀಣ ಅಭ್ಯುದಯ ಸೇವಾ ಸಂಘ, ಆರ್ಯವೈಶ್ಯ ಮಹಿಳಾ ಸಂಘ, ಗಾಯತ್ರಿ ಮಹಿಳಾ ಸಂಘ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು. ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.