ಸುದ್ದಿ ಸಂಕ್ಷೇಪ
ವೈದ್ಯ ವಿದ್ಯಾರ್ಥಿಗಳಿಂದ ಶ್ರಮದಾನ
ಮೈಸೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಆಯೋಜಿಸಿದ್ದ ರಾಷ್ಟ್ರೀಯ ಯುವ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಶಿಬಿರಾರ್ಥಿಗಳು ನಗರದ ಮೃಗಾಲಯದಲ್ಲಿ ಶ್ರಮದಾನ ನಡೆಸಿದರು. ಮಂಗಳವಾರ ಸುಮಾರು ಎಂಟು ರಾಜ್ಯಗಳಿಂದ ಆಗಮಿಸಿದ್ದ ಸುಮಾರು 150 ಮಂದಿ ಯುವ ವೈದ್ಯ ವಿದ್ಯಾರ್ಥಿಗಳು ಮೃಗಾಲಯದಲ್ಲಿ ಶ್ರಮದಾನ ನಡೆಸಿ, ಅಪರೂಪದ ಹಣ್ಣಿನ ಮತ್ತು ಔಷಧೀಯ ಮರ ಜಾತಿಗಳ ಸಸಿಗಳನ್ನು ನೆಟ್ಟರು. ಪರಿಸರದ ಬಗೆಗೆ ಪ್ರೀತಿಯನ್ನು ಯುವಕರಲ್ಲಿ ಹೆಚ್ಚಿಸುವ ಮತ್ತು ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ರಮಾಕಾಂತ್ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಭಟ್, ಮೃಗಾಲಯದ ಕಾರ್ಯ ನಿರ್ವಹಣಾ ನಿರ್ದೇಶಕ ಬಿ.ಪಿ. ರವಿ ಇದ್ದರು.
ಕಳ್ಳನ ಬಂಧನ: 6 ಬೈಕ್ ವಶ
ಮೈಸೂರು: ನಗರದ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 1.97 ಲಕ್ಷ ಮೌಲ್ಯದ 6 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಬೆಳವಾಡಿ ಅಮೃತೇಶ್ವರನಗರ ನಿವಾಸಿ ರಾಜಣ್ಣ ಎಂಬವರ ಪುತ್ರ ಹಾಗೂ ಚಾಲಕ ವೃತ್ತಿ ಮಾಡಿಕೊಂಡಿರುವ ಮೋಹನ (39) ಬಂಧಿತ ಆರೋಪಿ. ಈತ ವಾಲ್ಮೀಕಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದಾಗ ಪೊಲೀಸರು ಹಿಡಿದು ವಿಚಾರಣೆ ಮಾಡಿದಾಗ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾನೆ. ಈತ ಹ್ಯಾಂಡಲ್ ಲಾಕ್ ಮಾಡದ ಬೈಕ್ಗಳ ವೈರ್ಗಳನ್ನು ನೇರ ಸಂಪರ್ಕ ಕಲ್ಪಿಸಿ ಕಳವು ಮಾಡುತ್ತಿದ್ದ ಎಂಬ ಅಂಶ ವಿಚಾರಣೆಯಲ್ಲಿ ಗೊತ್ತಾಗಿದೆ. ಈತ ನೀಡಿರುವ ಮಾಹಿತಿ ಮೇರೆಗೆ ಒಟ್ಟು 6 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಕ್ಕಳಿಗೆ ತಟ್ಟಿದ ವಂತಿಗೆ ಹಾವಳಿ
ಮೈಸೂರು: ತಲೆತಲಾಂತರದಿಂದ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬಂದಿರುವ ಪೌರಕಾರ್ಮಿಕರ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುತ್ತಿದ್ದು, ವಂತಿಗೆ ಹಾವಳಿಯಿಂದ ನಮಗೆ ತೊಂದರೆ ಮಾಡುತ್ತಿವೆ ಎಂದು ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ರಾಜ್ ಅಳಲು ತೋಡಿಕೊಂಡರು. ನಾವು ಸ್ವಚ್ಛತಾ ಕಾರ್ಯ ಮಾಡಿದಂತೆ ನಮ್ಮ ಮಕ್ಕಳು ಇದೇ ಕಸುಬನ್ನು ಮುಂದುವರಿಸುವುದು ಬೇಡ. ಆದ್ದರಿಂದ ಶಾಲೆಗಳ ಶೋಷಣೆ ವಿರುದ್ಧ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್ಸಿಗೆ ಸೇರಿದ 101 ಜಾತಿಗಳು ಒಗ್ಗೂಡಲಿ
ಮೈಸೂರು: ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸಿರುವ ನೂರೊಂದು ಜಾತಿಗಳು ಒಗ್ಗೂಡಬೇಕು ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಕರೆ ನೀಡಿದರು. ನಗರದ ಜಗನ್ಮೋಹನ ಅರಮನೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟವು ಮಂಗಳವಾರ ಏರ್ಪಡಿಸಿದ್ದ ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದೇಶ ಮತ್ತು ರಾಜ್ಯದಲ್ಲಿ ಮಹಾಸಮರ ನಡೆಯುತ್ತಿದೆ. ಒಂದು ಕಾಲದಲ್ಲಿ ಪರಿಶಿಷ್ಟ ಜಾತಿ, ಪಂಗಡದವರನ್ನು ತುಂಬಾ ಕೀಳಾಗಿ ಕಾಣಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪರಿಶಿಷ್ಟರಿಗೂ ಯೋಚನಾಶಕ್ತಿ ಬಂದಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿ ಸೇರಿದೆ. ಈ ಕುರಿತು ಇಲ್ಲಿ ಚರ್ಚಿಸುವುದು ಸೂಕ್ತವಲ್ಲ. 101 ಜಾತಿಯೂ ಮಾನಸಿಕವಾಗಿ ಒಂದಾಗಿಲ್ಲ. ನಮ್ಮಲ್ಲೇ ಬಲ, ಎಡ ಎಂಬ ಒಡಕು ಬಂದಿದೆ ಎಂದು ವಿಷಾದಿಸಿದರು. ಪರಿಶಿಷ್ಟ ಜಾತಿ ಎಂದರೆ ಶೋಷಿತರು. ಹಿಂದೆ ಹಲವು ಜಾತಿಯವರು ಎಸ್ಸಿಗೆ ಸೇರುವುದಿಲ್ಲ. ಮೀಸಲಾತಿ ಬೇಡ ಎನ್ನುತ್ತಿದ್ದರು. ಆದರೆ, ಆಗ ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿಸುವಂತೆ ಹಲವರು ಬರುತ್ತಿದ್ದಾರೆ ಎಂದರು. ಎಲ್ಲರೂ ಒಂದಾಗಿ ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಚಿಂತಿಸಬೇಕು. ಪ್ರತಿಯೊಬ್ಬರು ಯೋಚಿಸಿ ಮತ ಹಾಕಬೇಕು. ಈಗಿನದ್ದು ಬಹಳ ಮಹತ್ವದ ಚುನಾವಣೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸ್ಪರ್ಧೆಯಲ್ಲಿದೆ. ಈಗ ಆಯ್ಕೆ ನಿಮ್ಮ (ಮತದಾರರ) ಮುಂದಿದೆ. ಸರಿಯಾದವರನ್ನು ಯೋಚಿಸಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.