3ನೇ ದಿನಕ್ಕೆ ಮುಂದುವರಿದ ಪ್ರತಿಭಟನೆ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ ಫ್ಯಾಷನ್ ಲಿಮಿಟೆಡ್ನ ಪ್ರೊಸೆಸಿಂಗ್ ಘಟಕವನ್ನು ಲಾಕ್ಔಟ್ ಮಾಡಿರುವುದರ ವಿರುದ್ಧ ಕಾರ್ಮಿಕರು ಆರಂಭಿಸಿರುವ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಖಾನೆಯ ಮುಂದೆ 500ಕ್ಕೂ ಹೆಚ್ಚು ಕಾರ್ಮಿಕರು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
3 ದಿನಗಳ ಹಿಂದೆ ದಿಢೀರನೆ ಲಾಕ್ಔಟ್ ನೋಟಿಸ್ ಪ್ರಕಟಿಸಿ ಕಾರ್ಖಾನೆ ಮುಚ್ಚಿತ್ತು. ಈ ವಿಚಾರದಲ್ಲಿ ಕಾರ್ಮಿಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಮಿಕ ಕಾನೂನುಗಳನ್ನು ಕಂಪನಿ ಸ್ಪಷ್ಟವಾಗಿ ಉಲ್ಲಂಘಿಸಿದೆ. ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಕಾರ್ಖಾನೆ ಮುಚ್ಚಿರುವುದರಿಂದ ಸುಮಾರು 520 ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕಾರ್ಮಿಕರ ಮೇಲೆ ಆಡಳಿತ ಮಂಡಳಿ ಅನಗತ್ಯವಾಗಿ ಕ್ಷುಲ್ಲಕ ಆರೋಪಗಳನ್ನು ಹೊರಿಸುತ್ತಿದೆ. ಇದಾವುದೂ ವಾಸ್ತವ ಅಲ್ಲ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.
ಸುಮಾರು 12 ಅಂಶಗಳ ಸುದೀರ್ಘ ನೋಟಿಸ್ ಪ್ರಕಟಿಸಿದ್ದ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಭದ್ರತಾ ಸೇವೆ ಹೊರತುಪಡಿಸಿ ಉಳಿದೆಲ್ಲದಕ್ಕೂ ಲಾಕ್ಔಟ್ ಅನ್ವಯವಾಗುವುದಾಗಿ ತಿಳಿಸಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಮಿಕ ಸಂಘಟನೆಗಳು, ಅಧಿಕಾರಿಗಳ ಮತ್ತು ಆಡಳಿತ ವರ್ಗದ ಧೋರಣೆ ಸರಿಯಲ್ಲ. ಕಾರ್ಮಿಕ ಕಾನೂನುಗಳ ಪ್ರಕಾರ ಈ ರೀತಿ ಯಾವುದೇ ಪೂರ್ವ ಮಾಹಿತಿ ಇಲ್ಲದೆ ಲಾಕ್ಔಟ್ ಮಾಡಿರುವುದು ಅಕ್ಷಮ್ಯ. ಹೇಳಿರುವ 12 ವಿವರಣೆಗಳ ಬಗ್ಗೆ ಕಾರ್ಮಿಕರಿಗೆ ಸ್ಪಷ್ಟನೆ ನೀಡಬೇಕಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಬೇಕು. ಆಡಳಿತ ಮಂಡಳಿ ಈ ಕೂಡಲೇ ಕಾರ್ಮಿಕರ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಅಹವಾಲು ಕೇಳಬೇಕು. ಅವೈಜ್ಞಾನಿಕ ಹೊರಗೀಲಿ ರದ್ದು ಮಾಡಿ ಕಾರ್ಖಾನೆಯಲ್ಲಿ ಎಂದಿನಂತೆ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು. ಕ್ಷುಲ್ಲಕ ಆರೋಪಗಳನ್ನು ಹಿಂದಕ್ಕೆ ಪಡೆದು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಲವು ಸಾಮಾಜಿಕ ಸಂಘಟನೆಗಳು ಮತ್ತು ವಿವಿಧ ಚಳವಳಿ ಸಂಘಟನೆಗಳೂ ಹೋರಾಟಕ್ಕೆ ಬೆಂಬಲ ನೀಡಿದ್ದು ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ಸೂಚನೆ ಇದೆ.