ಟೊಯೋಟಾ ಹೊರಗೀಲಿ; ಇಲಾಖೆ ಸಂಧಾನ ವಿಫಲ
ಬೆಂಗಳೂರು: ಬಿಡದಿಯಲ್ಲಿನ ಟೊಯೋಟಾ ಕಿರ್ಲೋಸ್ಕರ್ ವಾಹನ ಉತ್ಪಾದನಾ ಘಟಕದ ವಿವಾದ ಬಗೆಹರಿಸಲು ಕಾರ್ಮಿಕ ಇಲಾಖೆ ನಡೆಸಿದ ಸಂಧಾನ ವಿಫಲವಾಗಿದೆ.
ಸತತ ಎರಡು ದಿನಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ತಿಕ್ಕಾಟ ಅಂತ್ಯ ಕಂಡಿಲ್ಲ. ವೇತನ ಏರಿಕೆಗೆ ಕಾರ್ಮಿಕರು ಬಿಗಿಪಟ್ಟು ಹಿಡಿದಿದ್ದಾರೆ. ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಕೂಡ ಒಂದು ಹಂತದ ಸಭೆ ನಡೆಸಿ ಪರಿಹಾರ ಒದಗಿಸುವಲ್ಲಿ ವಿಫಲರಾದರು. ಚುನಾವಣೆ ಮುಂದಿರುವುದರಿಂದ ಅಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಯಲಿ ಎಂದು ರಾಜ್ಯ ಸರ್ಕಾರ ಅಲ್ಪ ಮಟ್ಟಿಗೆ ನಿರ್ಲಕ್ಷ್ಯ ತಾಳಿದೆ. ಬುಧವಾರ ಬೆಳಗ್ಗೆಯಿಂದ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಎರಡು ಹಂತದ ಸಭೆ ನಡೆಸಲಾಗಿದೆ. ಕಾರ್ಮಿಕರ ಸಂಘಟನೆ ಮುಖಂಡರು ಕೂಡ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಮ್ಮ ವಿಚಾರ ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕ ಇಲಾಖೆ ಉಪ ಆಯುಕ್ತರೊಡನೆ ಗುರುವಾರ ಬೆಳಗ್ಗೆ ಮತ್ತೊಂದು ಹಂತದ ಸಭೆ ನಡೆಸಲು ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ನಿರ್ಧರಿಸಿದೆ. 'ಸಮಸ್ಯೆ ಬಗೆಹರಿಸಲು ಕಾರ್ಮಿಕ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಆದರೆ ಬುಧವಾರ ನಡೆದ ಸಂಧಾನ ಸಭೆಯಲ್ಲಿ ಯಾವುದೇ ಪರಿಹಾರ ದೊರೆಯಲಿಲ್ಲ' ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.