ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಲು ಡಿಸಿಪಿ ಮನವಿ
ದೇವನಹಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದ್ವಿಚಕ್ರವಾಹನಗಳ ಅಪಘಾತದಿಂದಾಗಿ ಪ್ರಾಣಾಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು ಎಂದು ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗ ಉಪ ಪೊಲೀಸ್ ಆಯುಕ್ತ ಎಸ್. ಗಿರೀಶ್ ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆ ಹಾಗೂ ಮಾರುತಿ ಸುಜುಕಿ ಕಂಪನಿ ಸಂಯುಕ್ತ ಆಶ್ರಯದಲ್ಲಿ ಚಾಲನೆ ಸುರಕ್ಷತೆಗಾಗಿ ಆದರೆ ಸಾಹಸಕ್ಕಾಗಿ ಅಲ್ಲ ಎಂಬ ಮಾಹಿತಿಯೊಂದಿಗೆ ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿದ್ದರು.
ವಾಹನಗಳ ಚಾಲಕರಿಗೆ ಪೊಲೀಸರು ತೊಂದರೆ ಕೊಡುತ್ತಾರೆ ಎಂದು ಭಾವಿಸಬಾರದು. ಅವರು ಕಾನೂನಿನ ಕ್ರಮ ಕೈಗೊಳ್ಳಬೇಕಾದರೆ ಅದು ಚಾಲಕರ ಸುರಕ್ಷತೆಗಾಗಿ ಎಂಬುದನ್ನು ಅರಿಯಬೇಕು ಎಂದು ಡಿಸಿಪಿ ಗಿರೀಶ್ ತಿಳಿಸಿ ಪ್ರತಿದಿನ ನೂರಾರು ಅಪಘಾತಗಳು ನಡೆಯುತ್ತವೆ. ಎಲ್ಲವೂ ಪತ್ರಿಕೆಗಳಲ್ಲಿ ಬರಲು ಸಾಧ್ಯವಿಲ್ಲ ಎಂದರಲ್ಲದೆ ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭದಲ್ಲಿ ಅನೇಕ ಜೀವ ಉಳಿಸಬಹುದಾಗಿದೆ. ಅಲ್ಲದೆ ಸಣ್ಣ ಪುಟ್ಟ ಗಾಯಗಳಾಗಬಹುದು. ಆದ್ದರಿಂದ ಎಲ್ಲ ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಎಂದರು.
ಹೆಚ್ಚಿದ ಅಪಾಘಾತ: ಇದೇ ಸಂದರ್ಭದಲ್ಲಿ ಯಲಹಂಕ ಸಂಚಾರ ಈಶಾನ್ಯ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತಗಂಗಾಧರ್ ಮಾತನಾಡಿ ದೇವನಹಳ್ಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತಗಳು ನಡೆಯುತ್ತಿದ್ದು ಹದಿಹರೆಯದವರ ಪ್ರಾಣ ಹೋಗಿದೆ. ಇದರಿಂದ ಕೆಲವು ಪೋಷಕರು ಇರುವ ಒಬ್ಬ ಮಗನನ್ನೇ ಕಳೆದುಕೊಳ್ಳುಕ್ಕಾರೆ. ಆದ್ದರಿಂದ ಇನ್ನು ಮುಂದಾದರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ಮಾಡಿ ಎಂದರು.
ಆಕಾಶ್ ಇಂಟರ್ ನ್ಯಾಷನಲ್ ಆಸ್ಪತ್ರೆಯ ಡಾ. ಸತೀಶ್ಬಾಬು ಅವರು ಮಾತನಾಡಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿ ತಲೆಗೆ ತೀವ್ರತರ ಗಾಯಗೊಂಡಿದ್ದ ಕೆಲವು ವಿಡಿಯೋ ಚಿತ್ರಗಳ ಪ್ರದರ್ಶನ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ ಸಂದರ್ಭದಲ್ಲಿ ಅಪಘಾತವಾಗಿ ಪ್ರಾಣ ಉಳಿದಿದ್ದರೆ ಹಲವಾರು ತಿಂಗಳು ಆಸ್ಪತ್ರೆಯಲ್ಲಿರಬೇಕು. ಜೊತೆಗೆ ಹಣ ಕೂಡ ವೆಚ್ಚವಾಗುತ್ತದೆ. ಆದರೆ ಹೆಲ್ಮೆಟ್ ಧರಿಸಿದರೆ ಕೇವಲ ಸಣ್ಣಪುಟ್ಟ ಗಾಯಗಳಾಗುತ್ತವೆ. ಕೆಲವೇ ದಿನಗಳಲ್ಲಿ ವಾಸಿಯಾಗುತ್ತವೆ ಎಂದರು.
ಇದೇ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸಮೂರ್ತಿ, ಸುಜುಕಿ ಕಂಪನಿಯ ನವೀನ್ ಕುಮಾರ್, ಪತ್ರಕರ್ತರ ಸಂಘದ ಅಧಕ್ಷ ರಾಮಕೃಷ್ಣಪ್ಪ ಹಾಗೂ ಕರವೇ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.
ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸದಾಶಿವಯ್ಯ ಸ್ವಾಗತ ಕೋರಿದರು. ಸಮಾರಂಭಕ್ಕೆ ಮುನ್ನ ಸಂಚಾರಿ ಪೊಲೀಸ್ ಮತ್ತು ಕರವೇ ಕಾರ್ಯಕರ್ತರ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.