ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿಗಾಗಿ ಜೆಡಿಎಸ್ ಕೈಜೋಡಿಸಲಿ

Mainashree
Updated On : 21 Mar 2014, 12:42 pm

ರಾಮನಗರ: ರಾಮನಗರ ಜಿಲ್ಲೆಯ ಸಮಗ್ರ ನೀರಾವರಿ ಮತ್ತು ಅಭಿವೃದ್ಧಿಗಾಗಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಕಾಂಗ್ರೆಸ್ ಜತೆ ಕೈಜೋಡಿಸಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ತಮ್ಮ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ ಎಂದರು.
ಪ್ರತಿಪಕ್ಷಗಳ ಕಾರ್ಯಕರ್ತರು ತಮ್ಮ ಸಂಘಟನಾ ಶಕ್ತಿ, ಸಮಯ ಮತ್ತು ವಯಸ್ಸನ್ನು ಸುಖಾಸುಮ್ಮನೆ ವ್ಯರ್ಥ ಮಾಡಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡು ನಮ್ಮೊಂದಿಗೆ ಬರಬೇಕು ಎಂದು ಅವರು ಕರೆ ನೀಡಿದರು. ಸುರೇಶ್ ಅವರು ಸಿಕ್ಕ ಅಲ್ಪ ಅವಕಾಶದಲ್ಲೇ ಮಂಡಲ, ಗ್ರಾಮ ಪಂಚಾಯಿತಿ ಸದಸ್ಯನನ್ನು ಮೀರಿಸುವ ಮಟ್ಟಕ್ಕೆ ಕೆಳಸ್ತರದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಅಂತಹ ಅಭ್ಯರ್ಥಿಯನ್ನು ಮತ್ತೆ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ತಿಳಿಸಿದರು.
ದೀರ್ಘಾವಧಿ ಕಾರ್ಯಕ್ರಮ: ನಮ್ಮದು ಒಂದು ದಿನ ಇಲ್ಲವೇ ವಾರದ ಕಾರ್ಯಕ್ರಮವಲ್ಲ. ಅದೇನಿದ್ದರೂ ದೀರ್ಘಾವಧಿಯಿಂದ ಕೂಡಿದ್ದಾಗಿದೆ. ಗ್ರಾಮೀಣರು ಮತ್ತು ರೈತರ ಬದುಕನ್ನು ಹಸನುಗೊಳಿಸುವುದೇ ನಮ್ಮ ಗುರಿ ಎಂದು ಶಿವಕುಮಾರ್ ಹೇಳಿದರು.
ಈ ಭಾಗದ ಮತದಾರರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತವರ ಕುಟುಂಬಕ್ಕೆ ದೀರ್ಘಾವಧಿ ಅಧಿಕಾರ ನೀಡಿದ್ದಾರೆ. ನಾವು 50 ವರ್ಷದಲ್ಲಿ ಮಾಡಲಾಗದ ಕೆಲಸಗಳು, ಚಿಂತನೆಗಳು ಮತ್ತು ಕಾರ್ಯಕ್ರಮಗಳು ನಮ್ಮ ಮುಂದಿವೆ ಎಂದು ತಿಳಿಸಿದರು.
ಸಮೀಕ್ಷೆಗಳು ಸುಳ್ಳು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವ ಸಮೀಕ್ಷೆಗಳು ಸುಳ್ಳು. ನಮ್ಮ ಪಕ್ಷ ರಾಜ್ಯದಲ್ಲಿ 21 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎನ್ನುವ ಅಂಶ ನಮ್ಮದೇ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ ಎಂದು ಶಿವಕುಮಾರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನೆಲ್ಲ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದೆ. ಅದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಸಾಧ್ಯವಾಗಿರಲಿಲ್ಲ. ರಾಜ್ಯದ ಅಭಿವೃದ್ಧಿಗೆ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದರು.
ಗೆಲವು ನಿರ್ಧಾರವಾಗಿದೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರವು ದೀರ್ಘಾವಧಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.  ಈ ಬಾರಿ ಕಾಂಗ್ರೆಸ್ ಗೆಲವು ನಿರ್ಧಾರವಾಗಿದ್ದು, ಅಂತರ ಎಷ್ಟು ಲಕ್ಷದಷ್ಟಿರುತ್ತದೆ ಎನ್ನುವುದನ್ನು ಮಾತ್ರವೇ ಕಾತುರದಿಂದ ಕಾಯುತ್ತಿದ್ದೇವೆ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದರು.
ರಾಜಕಾರಣದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾಗಿದೆ. ಡಿ.ಕೆ.ಸುರೇಶ್ ಸಮರ್ಥ ಸಂಸದ ಎನ್ನುವ ಖ್ಯಾತಿ ಗಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದು, ಪ್ರತಿಪಕ್ಷಗಳಿಗೆ ಈ ಕ್ಷೇತ್ರದ ಮೇಲೆ ಯಾವ ನಿರೀಕ್ಷೆಯೂ ಉಳಿದಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement