ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ

Mainashree
Updated On : 21 Mar 2014, 12:44 pm

ರಾಮನಗರ: ಕಾಂಗ್ರೆಸ್‌ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್, ಬಿಜೆಪಿಯಿಂದ ಪಿ.ಮುನಿರಾಜುಗೌಡ ಸೇರಿದಂತೆ 5 ಮಂದಿ ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಗುರುವಾರ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಸುರೇಶ್ ಅವರು 3 ಪ್ರತಿಗಳಲ್ಲಿ ಮತ್ತು ಮುನಿರಾಜುಗೌಡ 2 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ತಮ್ಮ ಪಕ್ಷದ ಎ ಮತ್ತು ಬಿ ಫಾರಂ ಸಲ್ಲಿಸಿದ್ದಾರೆ. ಉಳಿದಂತೆ ಕೆ. ಮೋಹನ್, ಜೆ. ನಟರಾಜು, ಮಲ್ಲೇಶ್ ಪಕ್ಷೇತರರಾಗಿ ನಾಮಪತ್ರಗಳನ್ನು ಸಲ್ಲಿಸಿದರು.
ಬೃಹತ್ ಮೆರವಣಿಗೆ: ಡಿ.ಕೆ.ಸುರೇಶ್ ಅವರು ದೊಡ್ಡಾಲಹಳ್ಳಿಯಲ್ಲಿರುವ ತಮ್ಮ ತಂದೆ ಕೆಂಪೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿ, ತಾಯಿ ಮತ್ತುಸಹೋದರ ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆದು ರಾಮನಗರಕ್ಕೆ ಆಗಮಿಸಿದರು.
ಇಲ್ಲಿನ ನಗರದೇವತೆ ಶ್ರೀ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಸೀದಿ ಹಾಗೂ ಚರ್ಚ್‌ನಲ್ಲಿ ಪ್ರಾರ್ಥನೆ ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು. ಅಲ್ಲಿ ಕಾರ್ಯಕರ್ತರ ಜತೆ ಸಮಾಲೋಚಿಸಿ ಬೃಹತ್ ಮೆರವಣಿಗೆಯಲ್ಲಿ ತೆರಳಿದರು.
ಸಚಿವರು, ಸಿಪಿವೈ ಸಾಥ್: ಕಿವಿ ಗಡಚಿಕ್ಕುವ ಪಟಾಕಿ ಸದ್ದು, ತಮಟೆವಾದ್ಯ ಮತ್ತು ಜಯಘೋಷದೊಂದಿಗೆ ಮೆರವಣಿಗೆಯು ಕಂದಾಯ ಭವನದ ಬಳಿಗೆ ಆಗಮಿಸಿತು. ಅಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಂತರ ಸುರೇಶ್ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಧ್ಯಾಹ್ನ 1ಕ್ಕೆ ನಾಮಪತ್ರ ಸಲ್ಲಿಸಿದರು.
ಸುರೇಶ್ ಅವರಿಗೆ ಸಹೋದರ ಹಾಗೂ ಸಚಿವ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಅವರು ಸಾಥ್ ನೀಡಿದರು.
ಮೆರವಣಿಗೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವಣ್ಣ, ಪಿ.ಮುನಿರಾಜು, ಮಾಜಿ ಸಂಸದ ಎಂ.ಶ್ರೀನಿವಾಸ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಮುಖಂಡರಾದ ಮರಿದೇವರು, ಎ.ಮಂಜು, ರಘುನಂದನ್ ಶಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಸದ್ದಿಲ್ಲದೆ ನಾಮಪತ್ರ: ಸುರೇಶ್ ಅವರಿಗೂ ಮುನ್ನ ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರು ಪತ್ನಿ ಭವ್ಯ ಹಾಗೂ ಸ್ವಪಕ್ಷೀಯ ಬೆರಳೆಣಿಕೆ ಮುಖಂಡರೊಂದಿಗೆ ಆಗಮಿಸಿ ದ್ವಿಪ್ರತಿಯಲ್ಲಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ 11.15ಕ್ಕೆ ಮುನಿರಾಜುಗೌಡ ಅವರ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿತು. ಇದು ಸಾಂಕೇತಿಕವಾದರೂ ಎ ಮತ್ತು ಬಿ ಫಾರಂ ಸಲ್ಲಿಕೆಯಾಗಿದೆ. ಮಾ.26ಕ್ಕೆ ಪಕ್ಷದ ನಾಯಕರ ದಂಡು ಸಮೇತ ಅವರು ಮತ್ತೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ದಿನ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆಗಿದೆ. ಮುಖಂಡರು ಅಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಮತ್ತೆ ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಮುನಿರಾಜುಗೌಡ ಕಂದಾಯ ಭವನ ಸಮೀಪವೇ ಇರುವ ಬಿಜೆಪಿ ಕಚೇರಿಗೆ ತೆರಳಿ, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಶಿವಮಾದು, ರವಿಕುಮಾರಗೌಡ ಸಹಿತ ವಿವಿಧ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement