ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಘು ಲಾಠಿ ಪ್ರಹಾರ

Mainashree
Updated On : 21 Mar 2014, 12:45 pm

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಗುಂಪು ಚದುರಿಸಿದರು. ಸಚಿವರು, ಪಕ್ಷದ ಪ್ರಮುಖರೊಟ್ಟಿಗೆ ಸುರೇಶ್ ಅವರು ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದರು. ಬಳಿಕ ಪೊಲೀಸ್ ಪಹರೆ ಮತ್ತು ಬ್ಯಾರಿಕೇಡ್ ದಾಟಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಕಚೇರಿ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದರು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಯೂ ಸೇರಿದಂತೆ ಗರಿಷ್ಠ 5 ಮಂದಿಗೆ ಮಾತ್ರವೇ ಪ್ರವೇಶ ನಿಗದಿಪಡಿಸಲಾಗಿದೆ. ಅಭ್ಯರ್ಥಿ ಮತ್ತು ಮುಖಂಡರೊಟ್ಟಿಗೆ ನೂರಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಸುಳಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ ಮೇಲಧಿಕಾರಿಗಳು ಬಂದೋಬಸ್ತ್‌ಗೆ ನಿಯೋಜಿಸಲ್ಪಟ್ಟಿದ್ದ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದರು. ಆ ಸಿಟ್ಟನ್ನು ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಬೀಸಿ ತೀರಿಸಿಕೊಂಡರು. ಅಭ್ಯರ್ಥಿ ಮತ್ತು ಮುಖಂಡರು ಮೆರವಣಿಗೆಯಲ್ಲಿ ಆಗಮಿಸಿದ್ದ ವಾಹನದಲ್ಲಿದ್ದ ಕೆಲವರು ಮೈಕ್ ಮೂಲಕ ಲಾಠಿ ಬೀಸದಂತೆ ಪೊಲೀಸರಿಗೆ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಲಾಠಿ ಏಟು ತಿಂದ ನಂತರ ಕಾರ್ಯಕರ್ತರು ಮುಖ್ಯದ್ವಾರದಿಂದ ಚದುರಿದರು.
ಮಾಧ್ಯಮದವರಿಗೂ ನಿರ್ಬಂಧ
ರಾಮನಗರದಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕೊಠಡಿ ಮಾತ್ರವಲ್ಲದೆ ಜಿಲ್ಲಾಡಳಿತ ಭವನದೊಳಕ್ಕೇ ಪ್ರವೇಶ ನಿಷೇಧಿಸಿ, ನಿರ್ಬಂಧವನ್ನು ಹೇರಲಾಗಿತ್ತು. ರಾಜ್ಯದ ವಿವಿಧೆಡೆ ಮಾಧ್ಯಮ ಪ್ರತಿನಿಧಿಗಳು ಮತ್ತು ಛಾಯಾಗ್ರಹಕರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಸೆರೆ ಹಿಡಿದಿದ್ದಾರೆ. ಆದರೆ, ಇಲ್ಲಿ ಜಿಲ್ಲಾಡಳಿತ ಭವನಕ್ಕೇ ಪತ್ರಕರ್ತರನ್ನು ಸೇರಿಸದೆ ಹೊರಗಿಟ್ಟಿದ್ದು ಮಾತ್ರ ವಿಪರ್ಯಾಸದ ಸಂಗತಿ. ರಾಜಕೀಯ ಪುಡಾರಿಗಳು, ಪ್ರಭಾವಿಗಳು ಸೇರಿದಂತೆ ಕೆಲವರು ತಮ್ಮ ಕೆಲಸಗಳಿಗೆ ಸಲೀಸಾಗಿಯೇ ಜಿಲ್ಲಾಡಳಿತ ಭವನಕ್ಕೆ ಹೋಗಿ ಬಂದ ನಿದರ್ಶನವಿದೆ. ಇಷ್ಟು ಸಾಲದೆನ್ನುವಂತೆ ಭವನದ ಮೆಟ್ಟಿಲೇರಿ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಿಂತಿದ್ದೂ ಉಂಟು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement