ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಶ್ವಮಾನವರಾಗುವ ಪ್ರಯತ್ನ ಮಾಡಿ

Mainashree
Updated On : 21 Mar 2014, 12:44 pm

ಚನ್ನಪಟ್ಟಣ: ಆ ಮತ ಈ ಮತ ಎಂದು ಮಾನವರು ಸ್ವಾರ್ಥಸಾಧನೆಗಾಗಿ ಸ್ಥಾಪಿಸಿರುವ ಮತಗಳಿಗೆ ಜೋತು ಬೀಳದೆ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕೆಂದು ರಾಮನಗರ ಸರ್ಕಾರಿ ಪ್ರಥಮದರ್ಜೆಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ವಿ.ಎಚ್.ರಾಜಶೇಖರ್ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ   ಸಾಹಿತಿ ಮತ್ತೀಕೆರೆ ಚಲುವರಾಜು ನೀಡಿರುವ ಎಂ. ಬೆಟ್ಟೇಗೌಡ ನೆನಪಿನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದ ಅವರು, ಕುವೆಂಪು ಕರೆ ನೀಡಿರುವಂತೆ ವಿಶ್ವ ಮಾನವರಾಗಲು ನಾವೆಲ್ಲ ಸಂಕಲ್ಪ ತೊಡಬೇಕಿದೆ. ಎಲ್ಲಾ ಜಾತಿ ಧರ್ಮಗಳನ್ನು ಮೀರಿದ್ದು ಮಾನವೀಯತೆ ಎಂಬ ಸತ್ಯವನ್ನು ಅರಿತಾಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯ ಎಂದರು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ  ಜಾತಿ ಧರ್ಮದ ಹೆಸರಿನಲ್ಲಿ ಕೆಲವರ್ಗ ದೇಶವನ್ನು ಒಡೆದು ಆಳುವ ನೀತಿಯನ್ನು ಶತಮಾನಗಳಿಂದ ಅನುಸರಿಸಿಕೊಂಡು ಬಂದವು. ಇತ್ತೀಚಿನ ದಿನಗಳಲ್ಲಿ ರಾಜಕಾರಣ ಇದನ್ನು ಮುಂದುವರೆಸಿಕೊಂಡು ಬಂದಿದೆ. ಮತರಾಜಕಾರಣಕ್ಕಾಗಿ ವ್ಯವಸ್ಥೆಯನ್ನು ತಮ್ಮ ಕಪಿ ಮುಷ್ಟಿಯಲ್ಲಿರಿಸಿಕೊಂಡು ಜನರನ್ನು ದಿಕ್ಕುತಪ್ಪಿಸುತ್ತಿವೆ ಎಂದರು.
ವಿಷಾದ: ಬುದ್ಧ, ಬಸವ, ಗಾಂಧಿ ಮೊದಲಾದ ಸತ್ಯಾವತಾರಗಳು ದೇಶದ ಮಾನವ ಜನಾಂಗವನ್ನು  ನಿರಂಕುಶ ಮತಿಗಳಾಗಿಸಲು ಪ್ರಯತ್ನಿಸಿದರು. ಇವರ ಮುಂದುವರೆದ ಭಾಗವಾಗಿ ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತಿಗಳು ವೈಚಾರಿಕತೆ ಎಂಬ  ಅಮೃತವನ್ನು ಕಡೆದು ನಮ್ಮ ಮುಂದೆ ಇರಿಸಿದರು.  ಇತ್ತೀಚಿನ ಯುವ ಸಮುದಾಯ ಇದನ್ನೆಲ್ಲ ದಿಕ್ಕರಿಸಿ  ಪಕ್ಷ ರಾಜಕಾರಣ ನೀಡುತ್ತಿರುವ ಅಪೀಮನ್ನು ತಿಂದು ತಾವು ಆಳಾಗುತ್ತಿರುವ ಜತೆಗೆ ಸಮಾಜವನ್ನು ಆಳುಮಾಡುತ್ತಿದೆ  ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ.ನಾಗೇಶ್, ಮೌಢ್ಯ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ದನಿ ಎತ್ತಿದ್ದು ಕನ್ನಡ ಸಾಹಿತ್ಯ. ಪಂಪನಿಂದ ಕುವೆಂಪುವರೆಗೆ ಎಂದು ನಾವು ಗುರುತಿಸುವ ಸಾಹಿತ್ಯದ ಕಾಲಘಟ್ಟ ಆಯಾ ಯುಗಧರ್ಮಕ್ಕೆ ತಕ್ಕಂತೆ ವೈಚಾರಿಕತೆಯನ್ನು ಸಮಾಜಕ್ಕೆ ಬಿತ್ತುತ್ತಾ ಸಾಗಿದೆ ಎಂದು ತಿಳಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ,  ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು,  ಪ್ರಾಂಶುಪಾಲ ಪ್ರೊ.ಎಸ್.ಲಿಂಗಣ್ಣಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನೇತ್ರಾವತಿಗೌಡ, ಸಹಪ್ರಾಧ್ಯಾಪಕ ಡಾ. ಮಧುಸೂದನಾಚಾರ್ಯ ಜೋಷಿ,  ತಾ.ಕಸಾಪ ಕಾರ್ಯದರ್ಶಿ ವಿಜಯ್ ರಾಂಪುರ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಗುರುಲಕ್ಷ್ಮಿ, ಸಿಂಧು, ಭಾರ್ಗವಿ ಗೀತಗಾಯನ ನಡೆಸಿಕೊಟ್ಟರು. ವಿದ್ಯಾರ್ಥಿ ಯೋಗೇಶ್ ಸ್ವಾಗತಿಸಿ, ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ನಿರೂಪಿಸಿ, ರವಿಕಿರಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement