ಸ್ವಕ್ಷೇತ್ರ ಬೆಂ.ಗ್ರಾ. ಕುಮಾರಸ್ವಾಮಿ ಗುಡ್ ಬೈ?
ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜಕೀಯವಾಗಿ ಜನ್ಮ ನೀಡಿದ ಸ್ವಕ್ಷೇತ್ರ ಬೆಂಗಳೂರು ಗ್ರಾಮಾಂತರಕ್ಕೆ ಬೆನ್ನು ತೋರಿ, ನೆರೆಯ ಚಿಕ್ಕಬಳ್ಳಾಪುರವನ್ನೇ ಅಪ್ಪಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಇದನ್ನು ಚಿಕ್ಕಬಳ್ಳಾಪುರದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದ ಸಮಾರೋಪದಲ್ಲಿ ಸ್ವತಃ ಕುಮಾರಸ್ವಾಮಿ ಅವರಾಡಿದ ಮಾತುಗಳು ಪುಷ್ಟೀಕರಿಸಿವೆ. ಇಷ್ಟಲ್ಲದೆ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರದ ಆಯ್ಕೆ ಮಾತ್ರವೇ ಬಾಕಿ ಉಳಿದಿದೆ.
ಒತ್ತಡಕ್ಕೆ ಮಣಿದಿಲ್ಲ: ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಸುಳಿವಿನ ಬೆನ್ನಲ್ಲೇ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ರಾಮನಗರ ಜಿಲ್ಲೆಯ ಬೆಂಬಲಿಗರು ಮತ್ತು ಅಭಿಮಾನಿಗಳು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ಬೆದರಿಕೆ ಒಡ್ಡಿದ್ದರೆ, ಪಕ್ಷದ ಪದಾಧಿಕಾರಿಗಳು ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಅವರೆಲ್ಲರಿಗೂ ಕುಮಾರಸ್ವಾಮಿ ತಮ್ಮ ಸ್ಪರ್ಧೆ ಅನಿವಾರ್ಯತೆ ಮನದಟ್ಟು ಮಾಡಿಕೊಟ್ಟು, ಸಾಗಹಾಕುತ್ತಲೇ ಬಂದಿದ್ದಾರೆ.
ರಾಮನಗರಕ್ಕೆ ಭೇಟಿ: ದೇವೇಗೌಡರ ಕುಟುಂಬ ಇಲ್ಲಿವರೆಗೆ ಹಾಸನ ಹೃದಯ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳು ತಮ್ಮೆರಡು ಕಣ್ಣುಗಳೆನ್ನುತ್ತಿದ್ದರು. ಇದೀಗ ಕುಮಾರಸ್ವಾಮಿ ರಾಮನಗರ ಮತ್ತು ಚಿಕ್ಕಬಳ್ಳಾಪುರ ತಮ್ಮೆರಡು ಕಣ್ಣುಗಳೆನ್ನುವ ಮಾತನ್ನು ಅಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ರಾಮನಗರದಲ್ಲಿ ಅನುಮತಿ ಪಡೆದುಕೊಳ್ಳುವ ಶಾಸ್ತ್ರ ಮುಗಿಸುವುದಕ್ಕಾಗಿ ಕುಮಾರಸ್ವಾಮಿ ಶುಕ್ರವಾರ ಇಲ್ಲಿಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ದೃಢಪಡಿಸಿವೆ.
ಎಚ್‌ಡಿಕೆ ಸರ್ವತಂತ್ರ ಸ್ವತಂತ್ರರು
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಿ ಬೇಕಾದರೂ ಸ್ಪರ್ಧೆಗೆ ಇಳಿಯಲು ಅವರು ಸರ್ವತಂತ್ರ ಸ್ವತಂತ್ರರು ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಕುಮಾರಸ್ವಾಮಿ ಕ್ಷೇತ್ರಾಂತರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವಿಷಯ ಕಾಂಗ್ರೆಸ್ ಪಕ್ಷಕ್ಕೆ ಅಪ್ರಸ್ತುತ ಎಂದು ಅವರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ರಣೋತ್ಸಾಹ
ಕುಮಾರಸ್ವಾಮಿ ಕ್ಷೇತ್ರಾಂತರ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ಇನ್ನೂ ಇಮ್ಮಡಿಯಾಗಿದೆ. ಈಗಾಗಲೇ ತಮ್ಮ ಅಭ್ಯರ್ಥಿ ಗೆದ್ದಾಗಿದೆ. ಲೀಡ್ ಎಷ್ಟೆನ್ನುವುದಕ್ಕೆ ಫಲಿತಾಂಶ ಕಾಯಬೇಕಿದೆಯಷ್ಟೇ ಎನ್ನುವ ಮಾತು ಕಾಂಗ್ರೆಸ್ಸಿಗರದ್ದಾಗಿದೆ. ಕಳೆದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆಗಿಂತಲೂ ಹೆಚ್ಚು ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಸೇರಿದ್ದರು. ಸ್ವತಃ ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರು ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರನ್ನು ಈಗ ಹೆಚ್ಚು ಟೀಕಿಸುವ ಗೋಜಿಗೆ ಹೋಗದೆ ಜಾಣ್ಮೆ ಮೆರೆಯುತ್ತಿದ್ದಾರೆ.
ಮಂಕು ಕವಿದ ವಾತಾವರಣ
ಬೆಂಗಳೂರು ಗ್ರಾಮಾಂತರದಿಂದಲೇ ಸ್ಪರ್ಧೆಗೆ ಸ್ವತಃ ಅಭ್ಯರ್ಥಿ ಪ್ರಭಾಕರರೆಡ್ಡಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೇರುತ್ತಿರುವ ಒತ್ತಡಕ್ಕೆ ಮಣಿಯದ ಕುಮಾರಸ್ವಾಮಿ ಚಿಕ್ಕಬಳ್ಳಾಪುರದ ಕಡೆ ಮುಖಮಾಡಿ ನಿಂತಿರುವುದರಿಂದ ಇಲ್ಲಿನ ಜೆಡಿಎಸ್ ಪಾಳಯಕ್ಕೆ ಮಂಕು ಬಡಿದಂತಾಗಿದೆ. ಕುಮಾರಸ್ವಾಮಿ ಮೂಡಿಸಿರುವ ಗೊಂದಲದಿಂದ ಈ ಕ್ಷೇತ್ರದ ಅಭ್ಯರ್ಥಿ ಪ್ರಭಾಕರರೆಡ್ಡಿ ಅವರ ನಾಮಪತ್ರ ಸಲ್ಲಿಕೆ ಮುಹೂರ್ತವೂ ನಿಗದಿ ಆಗದಂತಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರ ಪ್ರಾರಂಭಿಸಿದ್ದರೂ ಜೆಡಿಎಸ್ ಒಂದು ಸುತ್ತಿನ ಕಾರ್ಯಕರ್ತರ ಸಭೆಗೆ ಸುಸ್ತು ಎನ್ನುವಂತಾಗಿದೆ.
ಮತ್ತೀಕೆರೆ ಜಯರಾಮ್