ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇದು ಜೆಡಿಎಸ್‌ನ ವಿಷಯ

Mainashree
Updated On : 22 Mar 2014, 12:20 pm

ರಾಮನಗರ: ವಿಷ... ವಿಷ... ವಿಷ...
ಇದು, ಜೆಡಿಎಸ್ ಪಾಳೆಯದಲ್ಲಿ ಪ್ರತಿ ಚುನಾವಣೆಯಲ್ಲೂ ಕೇಳಿ ಬರುತ್ತಲೇ ಇರುವ ಶಬ್ದವಾಗಿದೆ. ಈ ಬಾರಿ ಚುನಾವಣೆಯಲ್ಲೂ ಅದು ಪುನರಾವರ್ತನೆ ಆಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಬಂದಾಗೆಲ್ಲ ವಿಷದ ವಿಷಯ ಮುಂದಿಟ್ಟುಕೊಂಡೇ ಮಾತನಾಡುತ್ತಿದ್ದರು. ಈಗ ಅದೇ ವಿಷದ ಪ್ರಸ್ತಾಪ ಸ್ವತಃ ಅವರಿಗೇ ತಿರುಗುಬಾಣವಾಗಿದೆ. ಕುಮಾರಸ್ವಾಮಿ ಎರಡು ಚುನಾವಣೆಗಳಲ್ಲಿ ಭಿನ್ನ ಕಾರಣಕ್ಕೆ ವಿಷದ ಪ್ರಯೋಗ ನಡೆಸಿದ್ದರೆ, ಈಗ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಕ್ಷೇತ್ರಾಂತರ ಮಾಡದಂತೆ ತಡೆಯಲು ಅದೇ ವಿಷ ಮುಂದಿಟ್ಟುಕೊಂಡಿದ್ದಾರೆ.
ಎಚ್‌ಡಿಕೆ ಆಗ ಹೇಳಿದ್ದು: 2009ರಲ್ಲಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆಗೆ ಆರಿಸಿ ಹೋದರು. ಅವರ ರಾಜಿನಾಮೆಯಿಂದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿತ್ತು. ಜೆಡಿಎಸ್ ಹುರಿಯಾಳು ಆಗಿ ಕೆ.ರಾಜು ಅವರನ್ನು ಕಣಕ್ಕೆ ಇಳಿಸಲಾಗಿತ್ತು. ರಾಜು ಸ್ಪರ್ಧೆಯಿಂದ ಜೆಡಿಎಸ್ ಪಾಳೆಯದಲ್ಲಿ ಭಿನ್ನಮತ ಮೂಡಿತ್ತು. ಸ್ವಪಕ್ಷೀಯರೇ ಕಾಲೆಳೆಯುವ ಆತಂಕ ಎದುರಾದಾಗಿತ್ತು. ಇದರಿಂದ ಬೇಸತ್ತಿದ್ದ ಕುಮಾರಸ್ವಾಮಿ, ಪಕ್ಷವನ್ನು ಗೆಲ್ಲಿಸದಿದ್ದರೆ ನನಗೆ ವಿಷ ಕೊಡಿ ಎಂದು ಪ್ರಚಾರ ಸಭೆಯಲ್ಲಿ ಕಣ್ಣೀರಿಟ್ಟಿದ್ದರು. ರಾಜು ಗೆಲವು ಸಾಧಿಸಿದ್ದರು.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಇಲ್ಲವೇ ಕಿಂಗ್‌ಮೇಕರ್ ಎನ್ನುವ ಅತೀವ ನಂಬಿಕೆಯೊಂದಿಗೆ ಕುಮಾರಸ್ವಾಮಿ ರಾಜ್ಯವ್ಯಾಪಿ ಸುತ್ತಿ ಪ್ರಚಾರ ನಡೆಸಿದ್ದರು. ನಾಮಪತ್ರ ಸಲ್ಲಿಸಿ ಹೋದವರು ಸ್ವಕ್ಷೇತ್ರ ರಾಮನಗರದಲ್ಲಿ ಪ್ರಚಾರ ನಡೆಸುವುದಕ್ಕೂ ಬಂದಿರಲಿಲ್ಲ.
ನಾಮಪತ್ರ ಸಲ್ಲಿಸಿದ ದಿನವೇ ಅವರು ಇಲ್ಲಿಗೆ ಪ್ರಚಾರಕ್ಕೆ ಬರಲಾಗದು. ಕಾರ್ಯಕರ್ತರೇ ಹೋರಾಟ ಮಾಡಿ, ಗೆಲ್ಲಿಸಿಕೊಳ್ಳಿ ಎಂದಿದ್ದರು. ಇಷ್ಟಲ್ಲದೆ, ರಾಮನಗರ ಮತ್ತು ನನ್ನದು ತಾಯಿ ಹಾಗೂ ಮಗನ ಸಂಬಂಧ. ಯಾವ ತಾಯಿಯೂ ಹೆತ್ತ ಮಗನಿಗೇ ವಿಷ ಉಣಿಸುವುದಿಲ್ಲ ಎಂದು ಪ್ರಸ್ತಾಪಿಸಿದ್ದರು.
ಈಗಲೂ ಅದೇ ವಿಷ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅಣಿಯಾಗಿರುವ ಕುಮಾರಸ್ವಾಮಿ ಈಗಾಗಲೇ ಸ್ವಕ್ಷೇತ್ರ ರಾಮನಗರದಿಂದ ಒಂದು ಹೆಜ್ಜೆ ಆಚೆ ಇಟ್ಟಾಗಿದೆ. ಅವರನ್ನು ತಡೆಯಲು ಈಗ ಕಾರ್ಯಕರ್ತರೂ ವಿಷ ಹಿಡಿದೇ ನಿಂತಿದ್ದಾರೆ.
ರಾಮನಗರದಲ್ಲಿ ಶುಕ್ರವಾರ ಗದ್ದಲದಿಂದ ಬರಖಾಸ್ತುಗೊಂಡ ಜೆಡಿಎಸ್ ಸಭೆಯಲ್ಲೂ ವಿಷ ಕುಡಿದಾದರೂ ಸರಿಯೇ ಕುಮಾರಣ್ಣನನ್ನು ಇಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಕೂಗಾಡಿದ್ದಾರೆ. ಕಾರ್ಯಕರ್ತನೊಬ್ಬ ಜೆಡಿಎಸ್ ಮುಖಂಡರ ಕಾರಿಗೆ ಅಡ್ಡ ಮಲಗಿದ್ದೂ ಉಂಟು.

 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement