ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಷೇತ್ರದ ಹೆಸರಿಗೂ, ವ್ಯಾಪ್ತಿಗೂ ತಾಳೆಯೇ ಇಲ್ಲ

Mainashree
Updated On : 22 Mar 2014, 12:27 pm

ರಾಮನಗರ: ರಾಜ್ಯದ ಬಹುತೇಕ ಲೋಕಸಭೆ ಕ್ಷೇತ್ರಗಳು ಆಯಾ ಜಿಲ್ಲಾ ಕೇಂದ್ರದ ಹೆಸರಿನಲ್ಲಿವೆ. ಆದರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕತೆ ಹಾಗಲ್ಲ. ಈ ಕ್ಷೇತ್ರದ ಹೆಸರಿಗೂ, ಅದರ ವ್ಯಾಪ್ತಿಗೂ ತಾಳೆಯೇ ಇಲ್ಲದಂತಾಗಿದೆ.
ಬೆಂಗಳೂರು ಗ್ರಾಮಾಂತರ ಹೆಸರಿನಲ್ಲಿ ಜಿಲ್ಲೆಯಿದ್ದು, ಅದರ ಒಂದೇ ಒಂದು ಹಳ್ಳಿಯೂ ಈ ಲೋಕಸಭಾ
ಕ್ಷೇತ್ರಕ್ಕೆ ಸೇರಿಲ್ಲ. ಆದರೂ ಈ ಕ್ಷೇತ್ರಕ್ಕೆ ಬೆಂಗಳೂರು ಗ್ರಾಮಾಂತರವೆಂದು ನಾಮಕರಣ ಮಾಡಿರುವುದು ವಿಪರ್ಯಾಸವೇ ಸರಿ.
ಹೆಸರಿನ ಮಹತ್ವವಷ್ಟೇ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಸಾಕಷ್ಟು ಮಹತ್ವವಿದೆ. ಹೀಗಾಗಿ ಕ್ಷೇತ್ರಕ್ಕೆ ಮಹತ್ವ ತಂದುಕೊಡಲಷ್ಟೇ ಬೆಂಗಳೂರು ಗ್ರಾಮಾಂತರದ ಹೆಸರಿನಲ್ಲಿ ಈ ಲೋಕಸಭಾ ಕ್ಷೇತ್ರ ಉದಯಿಸಿದೆಯೇ ಹೊರತು ಮತ್ತಿನ್ನೇನೂ ಅಲ್ಲ.  2009ರ ಚುನಾವಣೆವರೆಗೂ ಈ ಕ್ಷೇತ್ರಕ್ಕೂ ಬೆಂಗಳೂರೇ ಕೇಂದ್ರ ಸ್ಥಾನವಾಗಿತ್ತು. ನಾಮಪತ್ರ ಸಲ್ಲಿಕೆ, ಎಣಿಕೆ ಸಹಿತ ಪ್ರಕ್ರಿಯೆಗಳೆಲ್ಲ ಅಲ್ಲೇ ನಡೆದಿದ್ದವು. ಚುನಾವಣಾ ಆಯೋಗವು 2013ರ ಉಪ ಚುನಾವಣೆ ವೇಳೆಗೆ  ಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ರಾಮನಗರಕ್ಕೆ ಮನ್ನಣೆ ನೀಡಿದೆ.  
ಹೆಸರು ಬದಲಾವಣೆ:  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಅಲ್ಲಿನ ಎರಡು ಜಿಲ್ಲೆಗಳ ಹೆಸರಿನೊಂದಿಗೆ ಜಂಟಿಯಾಗಿ ಮೂಡಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರವನ್ನು ರಾಮನಗರ ಕ್ಷೇತ್ರ ಇಲ್ಲವೇ ಬೆಂಗಳೂರು-ರಾಮನಗರ ಕ್ಷೇತ್ರವೆಂದು ಬದಲಿಸಬೇಕೆನ್ನುವ ಕೂಗು ಕೇಳಿ ಬಂದಿದೆ.  ಈ ಕ್ಷೇತ್ರದಲ್ಲಿ ಬೆಂಗಳೂರು ನಗರ ಜಿಲ್ಲೆಯ 11 ಲಕ್ಷ ಮತದಾರರು , ರಾಮನಗರ ಜಿಲ್ಲೆಯಿಂದ 8 ಲಕ್ಷ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ 1.73 ಲಕ್ಷ ಮತದಾರರಿದ್ದಾರೆ. ಇಷ್ಟಾದರೂ ಕ್ಷೇತ್ರಕ್ಕೆ  ಬೆಂಗಳೂರು ಗ್ರಾಮಾಂತರದ ಹೆಸರು ಅದೆಷ್ಟು ಸಮಂಜಸ ಎನ್ನುವ ಪ್ರಶ್ನೆ ಇಲ್ಲಿ ಕಾಡುತ್ತಿದೆ.
ಕನಕಪುರವೇ ಇದು: ಅಸಲಿಗೆ ಈ ಲೋಕಸಭಾ ಕ್ಷೇತ್ರ 1967ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈಗಿನ ರಾಮನಗರ ಮತ್ತು ಆಗಿನ ಬೆಂಗಳೂರು ಜಿಲ್ಲೆಯ ತಾಲೂಕು ಕೇಂದ್ರವಾದ ಕನಕಪುರ ಹೆಸರಿನಲ್ಲಿ ಕ್ಷೇತ್ರವಿತ್ತು. 2004ರವರೆಗೂ
ಕನಕಪುರವೇ ಕ್ಷೇತ್ರವಾದರೂ ಕೇಂದ್ರ ಸ್ಥಾನ ಬೆಂಗಳೂರೇ ಆಗಿತ್ತು.
2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಒಂದಿಷ್ಟು ಸ್ವರೂಪ ಬದಲಿಸಿ ಕನಕಪುರವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನಾಗಿಸಲಾಯಿತು. ಅದಕ್ಕೂ ಒಂದು ವರ್ಷ ಮುಂಚೆಯೇ ಅಂದರೆ 2007ರಲ್ಲೇ ಬೆಂಗಳೂರು ಗ್ರಾಮಾಂತರದಿಂದ ರಾಮನಗರ ಪ್ರತ್ಯೇಕ ಜಿಲ್ಲೆಯಾಗಿ ಬೇರ್ಪಟ್ಟಿತ್ತು.
ಸ್ವರೂಪವೂ ಬದಲು : ಬೆಂಗಳೂರು ನಗರದ ಉತ್ತರಹಳ್ಳಿ, ಆನೇಕಲ್, ಮಂಡ್ಯ ಜಿಲ್ಲೆಯ ಮಳವಳ್ಳಿ, ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕನಕಪುರ ಲೋಕಸಭಾ ಕ್ಷೇತ್ರ ದೇಶದಲ್ಲೇ 2ನೇ ಮತ್ತು ರಾಜ್ಯಕ್ಕೆ ದೊಡ್ಡ ಕ್ಷೇತ್ರವಾಗಿತ್ತು.  ಮರು ವಿಂಗಡಣೆಯಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಕುಣಿಗಲ್ ಒಳಗೊಂಡಂತೆ ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿದೆ. ಇಲ್ಲಿ ಮಂಡ್ಯ ಜಿಲ್ಲೆ ಜತೆಗಿನ ಕೊಂಡಿ ಕಳಚಿ, ತುಮಕೂರಿನ ಜತೆ ಕೂಡಿತು.
ಅಲ್ಲೂ ಉಂಟು ರಾಮನಗರ ನಂಟು
ರಾಮನಗರವು ಪ್ರತ್ಯೇಕ ಜಿಲ್ಲೆ ಆದ ಬಳಿಕವೂ ಒಂದು ಹೋಬಳಿಯ ಮೂಲಕ ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆ ಜತೆಗೂ ನಂಟು ಉಳಿಸಿಕೊಂಡಿರುವುದು ವಿಶೇಷವಾಗಿದೆ.  ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಇಡೀ ಹೋಬಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.   ರಾಮನಗರ ಜಿಲ್ಲೆಯ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳ ಶಿಷ್ಟಾಚಾರದಲ್ಲಿ ಸೋಲೂರಿನ ಕಾರಣಕ್ಕೆ ನೆಲಮಂಗಲ ಕ್ಷೇತ್ರದ ಶಾಸಕ ಮತ್ತು ಚಿಕ್ಕಬಳ್ಳಾಪುರದ ಸಂಸದ ಇದ್ದೇ ಇರುತ್ತಾರೆ. ಹೇಳೋರು ಕೇಳೋರಿಲ್ಲದ ರಾಮನಗರದಲ್ಲಿ ಶಿಷ್ಟಾಚಾರ ಪಾಲನೆ ಮಾತ್ರ ಆಗುತ್ತಿಲ್ಲಷ್ಟೇ.

 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement