ಪಕ್ಷ ಮುನ್ನಡೆಸುವ ಕಾರ್ಯಕ್ಕೆ ಮುಂದಾಗಿ: ಅಕ್ರಂ ಖಾನ್ ಮನವಿ
ಚನ್ನಪಟ್ಟಣ: ನಗರಸಭಾ ಅಧ್ಯಕ್ಷ ಚುನಾವಣೆಯ ಬೆಳೆವಣಿಗೆಯಿಂದಾಗಿ ಪಕ್ಷಕ್ಕೆ ಸಾಕಷ್ಟು ಹಿನ್ನೆಡೆಯಾಗಿದ್ದು, ಇದೆಲ್ಲ ಗೊಂದಲಗಳನ್ನು ಪರಿಹರಿಸಿ ಪಕ್ಷ ಮುನ್ನಡೆಸುವ ಕಾರ್ಯಕ್ಕೆ ತಾಲೂಕು ಮತ್ತು ಜಿಲ್ಲಾಘಟಕಗಳು ಮುಂದಾಗಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ರಂ ಖಾನ್ ಆಗ್ರಹಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಪ್ರದೇಶದಲ್ಲಿ ಜೆಡಿಎಸ್ಗೆ ಈ ಹಿಂದಿನ ಚುನಾವಣೆಯಲ್ಲಿ ಸಾಕಷ್ಟು ಹಿನ್ನೆಡೆಯಾಗಿದ್ದು 16 ಸದಸ್ಯರನ್ನು ಒಗ್ಗೂಡಿಸಿ ಚುನಾವಣೆ ಎದುರಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಮುಜುಗರ ಅನುಭವಿಸ ಬೇಕಾಗುತ್ತದೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಪಕ್ಷಕ್ಕಾಗಿ 16 ಮಂದಿ ಸದಸ್ಯರನ್ನು ಒಗ್ಗೂಡಿಸಿ ಚುನಾವಣೆ ಎದುರಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ನಲ್ಲಿನ ಆಂತರಿಕ ಗೊಂದಲ, ಪರಸ್ಪರ ಗುಂಪುಗಾರಿಕೆಯಿಂದಾಗಿ ಸಾಕಷ್ಟು ಮುಖಂಡರಿಗೆ ಬೇಸರವಾಗಿ ಪಕ್ಷದಿಂದ ವಿಮುಖರಾಗುತ್ತಿದ್ದಾರೆ. ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಾಸೀಲ್ ಆಲಿಖಾನ್ ಪಕ್ಷ ತೊರೆಯಲು ಇದೇ ನಿಜವಾದ ಕಾರಣವಾಗಿದ್ದು ಇನ್ನಾದರೂ ನಾವೆಲ್ಲ ಎಚ್ಚೆತ್ತು ಕೊಳ್ಳದಿದ್ದರೆ ಮತ್ತಷ್ಟು ಮುಖಂಡರು ಪಕ್ಷದಿಂದ ಹೊರ ನಡೆಯುವ ಸಾಧ್ಯತೆ ಇದ್ದು ನಾವು ಎಚ್ಚೆತ್ತುಕೊಂಡು ಪಕ್ಷವನ್ನು ಸದೃಢಗೊಳಿಸ ಬೇಕಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ 23ನೇ ವಾರ್ಡಿನ ನಗರಸಭಾ ಸದಸ್ಯೆ ಕಮರ್ ನಿಜಾಮಿ, ನಗರಸಭಾ ಚುನಾವಣೆಯಲ್ಲಿ ನಾನು ಆಕಾಂಕ್ಷಿಯಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಮೀರ್
ಅಹ್ಮದ್ ನಮ್ಮ ನಾಯಕರಾಗಿದ್ದು ಅವರ ಸೂಚನೆಯಂತೆ ನಾನು ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಸಿದ್ಧವಿದ್ದೆ, ಆದರೆ ಅಭ್ಯರ್ಥಿಯಾಗಿದ್ದ ಉಜ್ಮಾ ಇಷ್ರತ್ ಪತಿ ಪರೀದ್ಖಾನ್ ಗೋರಿ ತಾಳ್ಮೆಯಿಂದ ವರ್ತಿಸಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದ್ದರೆ ನಗರಸಭೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು.