ಮತದಾನ ಪರಮೋಚ್ಚ ಅಧಿಕಾರ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಪಂಚಾಯಿತಿ ನೇತೃತ್ವದಲ್ಲಿ ಮತದಾರರ ಅರಿವು ಜಾಗೃತಿ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮದಗ ಅಂಗವಾಗಿ ನಗರದ ವಿವಿಧ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಮತ್ತು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, 18 ವರ್ಷ ಮೇಲ್ಪಟ್ಟ ಎಲ್ಲ ಜನರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕರ್ತವ್ಯ. ನೋಂದಾಯಿತ ಮತದಾರರು ಮತದಾನದ ದಿನ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಪರಮೋಚ್ಚ ಅಧಿಕಾರ ಎನಿಸಿರುವ ಮತದಾನದ ಹಕ್ಕನ್ನು ಚಲಾಯಿಸಬೇಕಾದ್ದು ಎಲ್ಲರ ಹೊಣೆಗಾರಿಕೆ. ದೇಶದ ಸಾರ್ವಭೌಮತ್ವದ ಘನತೆಯನ್ನು ಕಾಪಾಡಲು ಮತ್ತು ಭವಿಷ್ಯವನ್ನು ನಿರ್ಧರಿಸಲು ನಾವು ಮತದಾನ ಮಾಡಬೇಕಾದ್ದು ಕಡ್ಡಾಯ. ಸೂಕ್ತ ಮತ್ತು ದೇಶದ ಭವಿಷ್ಯತ್ತನ್ನು ಪ್ರಭಾವಿಸಬಲ್ಲ ನಾಯಕತ್ವವನ್ನು ತರಲು ಎಲ್ಲ ಜನ ಮತದಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಮೆರವಣಿಗೆ ಮತ್ತು ಜಾಥಾ ನಂತರ ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಜಾಗೃತಿಯ ಅರಿವು ಮೂಡಿಸಲಾಯಿತು. ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ತಿಮ್ಮೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಭೀಮರಾಜ್, ಪ್ರಹ್ಲಾದ್, ಮಂಜುನಾಥ್, ಸಿಆರ್ಪಿ ಹನುಮಂತರಾಯಪ್ಪ, ಸಿಡಿಪಿಓ ಜಯಲಕ್ಷ್ಮಿ, ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.