ಎತ್ತಿನಹೊಳೆ ಶಂಕುಸ್ಥಾಪನೆಗೆ ವೇದಿಕೆ ಸಿದ್ಧ: ಶಾಸಕ
ದೊಡ್ಡಬಳ್ಳಾಪುರ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಬರುವ ಮಾ.3ರಂದು ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾಗಿರುವ ಮುದ್ದೇನಹಳ್ಳಿ ಗ್ರಾಮದಲ್ಲಿ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ವೇದಿಕೆ ಸಜ್ಜಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಯೋಜನೆಗಳಡಿಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ವೀರಪ್ಪಮೊಯ್ಲಿ, ಹಲವು ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈಗಾಗಲೇ ಬರುವ ಲೋಕಸಭಾ ಚುನಾವಣೆಗೆ ಮೊಯ್ಲಿ ಅವರೇ ಈ ಕ್ಷೇತ್ರದ ಅಭ್ಯರ್ಥಿ ಎಂಬುದು ಅಧಿಕೃತವಾಗಿ ಹೊರಬಿದ್ದಿದೆ. ಈಗಾಗಲೇ ಪಕ್ಷದ ಸಂಘಟನೆಗೆ ಒತ್ತು ನೀಡಲಾಗಿದ್ದು, ಮತಗಟ್ಟೆ ಹಂತದಿಂದ ಪಕ್ಷವನ್ನು ಸುಸಜ್ಜಿತವಾಗಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನೀರಾವರಿ ಮತ್ತು ಮೂಲಸೌಕರ್ಯಗಳಿಗೆ ಒತ್ತು ನೀಡಿ ಹಲವು ಯೋಜನೆಗಳನ್ನು ಮೊಯ್ಲಿ ಜಾರಿಗೊಳಿಸಿದ್ದಾರೆ. ಅಲ್ಲದೆ ತೈಲ ಕಂಪನಿಗಳ ಸಹಕಾರದಲ್ಲಿ ನೀರು ಶುದ್ದೀಕರಣ ಘಟಕಗಳನ್ನು ತೆರೆದಿರುವುದು ಸೇರಿದಂತೆ ವಿವಿಧ ವಿನೂತನ ಬಗೆಯ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದಾರೆ ಎಂದು ವಿವರಿಸಿದರು.
ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಮಾತನಾಡಿ, ಮೊಯ್ಲಿ ಅವರ ಅವಧಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹಣಬೆ-ಬೊಮ್ಮನಹಳ್ಳಿ, ಎನ್ಎಚ್ 207-ಅಪ್ಪಕಾರನಹಳ್ಳಿ, ಹುಸ್ಕೂರು-ಆರ್.ಜಿ.ನಗರ-ಕಾಡನೂರು ರಸ್ತೆಗಳಿಗೆ ಸುಮಾರು 6.5 ಕೋಟಿ ಬಿಡುಗಡೆಯಾಗಿದೆ. ಅದೇ ರೀತಿ ಅಡಕವಾಳ-ಅಂಕನಹಳ್ಳಿ, ಚಿಕ್ಕಬೆಳವಂಗಲ-ಆರೂಡಿ ರಸ್ತೆಗಳಿಗೂ ಅನುದಾನ ಬಿಡುಗಡೆಯಾಗಿದೆ. ಜಕ್ಕಲಮಡಗು ನೀರು, ಮಹಿಳಾ ಕಾಲೇಜು ಮಂಜೂರಾತಿ ಸೇರಿದಂತೆ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಸಂಸದ ಮತ್ತು ಶಾಸಕರ ಪರಿಶ್ರಮ ಇದೆ ಎಂದು ವಿವರಿಸಿದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ದೊಡ್ಡಬೆಳವಂಗಲ ಹೋಬಳಿಯ ಅನೇಕ ಮುಖಂಡರುಗಳು, ಗ್ರಾಮ
ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಸಮಿತಿ ಉಪಾಧ್ಯಕ್ಷರಾಗಿದ್ದ ಶಶಿಧರ್ ಕಳೆದ ಚುನಾವಣೆ ವೇಳೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.