ಕಂಪ್ಯೂಟರ್ ಕಳ್ಳರು ನ್ಯಾಯಾಂಗ ಬಂಧನಕ್ಕೆ
ನೆಲಮಂಗಲ: ತಾಲೂಕಿನ ದಾಬಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿಡವಂದ ಕೈಗಾರಿಕಾ ವಲಯದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮೀಡಿಯಾ ಕಾಲೇಜಿನಲ್ಲಿ ಕಳವಾಗಿದ್ದ ಕಂಪ್ಯೂಟರ್ ಕಳ್ಳರನ್ನು ಪೊಲೀಸರು ಬಂದಿಸಿದ್ದಾರೆ. ಆರೋಪಿಗಳಾದ ಸೋಲೂರು ಹೋಬಳಿಯ ಕಕ್ಕೆಪಾಳ್ಯ ಗ್ರಾಮದ ತಿಲೋತ್ತಮ (23) ಹಾಗೂ ದೇವಗಾನಹಳ್ಳಿ ಮಂಜುನಾಥ (22) ಇಬ್ಬರು ದಾಬಸ್ಪೇಟೆಯ ಲಾಜ್ ಎಕ್ಸ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದು, ತಿಲೋತ್ತಮ ನಿಡವಂದದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮೀಡಿಯಾ ಕಾಲೇಜಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು 3 ತಿಂಗಳ ಹಿಂದೆ ಕಾಲೇಜಿನ ಸಣ್ಣ ಪುಟ್ಟ ಕಾರಣಗಳಿಗೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಕಂಪ್ಯೂಟರ್ ರೂಮಿನ ಕೀಯನ್ನು ಈತನೆ ತೆಗೆದುಕೊಂಡು ಬಂದಿದ್ದಾನೆ. ನಂತರ ಲಾಜ್ ಎಕ್ಸ್ಫೋರ್ಟ್ನಲ್ಲಿ ಕೆಲಸಕ್ಕೆ ಸೇರಿಕೊಂಡು ಮಂಜುನಾಥನಿಗೆ ಹಣದ ಆಮಿಶ ತೋರಿಸಿ ಕಾಲೇಜಿಗೆ ಹೋಗಿ 4 ಕಂಪ್ಯೂಟರ್ಗಳನ್ನು ಕಳ್ಳತನ ಮಾಡಿರುತ್ತಾರೆ. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೇಬಲ್ವೈರ್ ಕದಿಯುತ್ತಿದ್ದ ವ್ಯಕ್ತಿ ಸೆರೆ
ಕನಕಪುರ: ಕನಕಪುರದ ಹೊರವಲಯದ ಮನೆಗಳಲ್ಲಿ ಪಂಪ್ಸೆಟ್ಗಳ ಕೇಬಲ್ವೈರ್ಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವ್ಯಕ್ತಿ ಇಲ್ಲಿನ ನಮಾಜಿ ಬೋರೆ ರಸ್ತೆಯ ಈದ್ಗಾ ಮೊಹಲ್ಲಾ ನಿವಾಸಿ ಮುಜಾಹಿದ್ ಉ.ಮುಸ್ತಾಕ್ ಎಂದು ತಿಳಿದುಬಂದಿದೆ.
ವೃತ್ತನಿರೀಕ್ಷಕ ಸಿದ್ಧೇಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕ ಗಣೇಶ್
ತಂಡದವರು ಕನಕಪುರದ ಮಹಾರಾಜರ ಕಟ್ಟೆರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಯೊಂದರಲ್ಲಿ ಕೇಬಲ್ ಕದಿಯುತ್ತಿದ್ದ ಮುಜಾಹಿದ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.