ಕ್ಷಯ; ಎಚ್ಚರಿಕೆ ಇದ್ದರೆ ಭಯ ಇಲ್ಲ
ನಯನಾ ಬಿ.ಜೆ.
ಬೆಂಗಳೂರು: ಭಾರತದಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಬ್ಬ ವ್ಯಕ್ತಿಯನ್ನು ಕ್ಷಯ ರೋಗ ಬಲಿತೆಗೆದುಕೊಳ್ಳುತ್ತಿದೆ!
ಆಧುನಿಕ ವೈದ್ಯ ಸಂಶೋಧನೆಗಳ ಬಳಿಕವೂ ಈ ಕಾಯಿಲೆ ಜನರಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ಸಾಮಾನ್ಯ ಜನರಲ್ಲಿನ ಜಾಗೃತಿ ಕೊರತೆಯೇ ಈ ಸಮಸ್ಯೆಗೆ ಕಾರಣ ಎಂಬ ವಾದವಿದೆ.
ಸಂಶೋಧನೆ ಪ್ರಕಾರ ಪ್ರತಿ ಒಂದು ಲಕ್ಷ ಜನರಲ್ಲಿ 203 ಜನ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ. ಅಂದರೆ ಭಾರತದಲ್ಲೇ ಸುಮಾರು 24.36 ಲಕ್ಷ ಜನ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿರುವವರು ಕೇವಲ 70 ಸಾವಿರ ಮಂದಿ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ತಜ್ಞರು ಹೇಳುವ ಪ್ರಕಾರ ರೋಗಿಗಳ ದೊಡ್ಡ ಭಾಗವೇ ಆರೋಗ್ಯ ಸೇವೆಯಿಂದ ಹೊರಗಿದೆ.
ಸಾಮಾನ್ಯ ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಮಾಡಬಹುದಾಗಿದೆ. ಆದರೆ ನಿರ್ಲಕ್ಷ್ಯ ಹಾಗೂ ಜಾಗೃತಿ ಕೊರತೆಯಿಂದ ಆಧುನಿಕ ಚಿಕಿತ್ಸೆ ಲಭ್ಯತೆಯಲ್ಲೂ ಕ್ಷಯಕ್ಕೆ ಜನ ಬಲಿಯಾಗುತ್ತಿದ್ದಾರೆ.
ಚಿಕಿತ್ಸೆ ವೇಳೆ ಮದ್ಯಪಾನ, ಧೂಮಪಾನ ಮಾಡುವುದರಿಂದ ಕಾಯಿಲೆ ತೀವ್ರವಾಗುತ್ತದೆ. ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು ಕೊಳೆಗೇರಿ, ಗಣಿಕಾರಿಕೆ ಪ್ರದೇಶದಲ್ಲಿ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ. ಮಕ್ಕಳು, ಅಪೌಷ್ಟಿಕ ಮಕ್ಕಳು, ಎಚ್.ಐ.ವಿ. ಪೀಡಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವರಿಗೆ ಬೇಗ ತಗಲುವ ಸಾಧ್ಯತೆ ಇದೆ. ಗುಣಮಟ್ಟದ ಚಿಕಿತ್ಸೆ ನೀಡಿ ಕ್ಷಯರೋಗ ನಿಯಂತ್ರಿಸಲು ನ್ಯಾಷನಲ್ ಟ್ಯುಬರ್ಕ್ಯುಲೋಸಿಸ್ ಕಂಟ್ರೋಲ್ ಪ್ರೋಗ್ರಾಮ್ನ್ನು ಜಾರಿಗೆ ತರಲಾಗಿತ್ತು. ಕ್ಷಯಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ 2012ರ ಪಂಚವಾರ್ಷಿಕ ಯೋಜನೆಯನ್ನು ಆರಂಭಿಸಿದೆ. ಸರ್ಕಾರ ಹಲವಾರು ಕ್ಷಯರೋಗ ತಪಾಸಣೆ ಕೇಂದ್ರಗಳನ್ನು ತೆರೆದಿದೆ. ಆದರೆ ಜನರಿಂದ,
ಸದ್ಬಳಕೆಯಾಗುತ್ತಿಲ್ಲ.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಬಗ್ಗೆ 6 ತಿಂಗಳು ನೇರ ನಿಗಾ ವಹಿಸಲಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರೆಗಳನ್ನು ರೋಗಿಗಳಿಗೆ ನೀಡುವ ಜವಾಬ್ದಾರಿ ಆಸ್ಪತ್ರೆ ವಹಿಸಿಕೊಂಡಿರುತ್ತದೆ. ರೋಗಿ ಮಾತ್ರೆಯನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ. ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಕೇಂದ್ರ ಹಾಗೂ ಇನ್ನಿತರ ಸರ್ಕಾರಿ ಘಟಕಗಳಲ್ಲಿ ಮಾತ್ರೆ ಇರಿಸಿರುತ್ತಾರೆ. ವಾರದಲ್ಲಿ 3 ದಿನ ಕೇಂದ್ರಗಳಿಗೆ ಬಂದು ಮಾತ್ರೆಯನ್ನು ತೆಗೆದುಕೊಳ್ಳಬೇಕು.
ಡ್ರಗ್ ರೆಸಿಸ್ಟೆನ್ಸ್ ಟಿ.ಬಿ ತಿಂಗಳ ಚಿಕಿತ್ಸೆಗೆ ಸುಮಾರು 7ರಿಂದ 8ಸಾವಿರ. ಮಲ್ಟಿ ಡ್ರಗ್ ರೆಸಿಸ್ಟೆನ್ಸ್ಗೆ ಎರಡು ವರ್ಷಕ್ಕೆ 2 ರಿಂದ 3 ಲಕ್ಷ. ಎಕ್ಟ್ರ್ಸೀಮ್ ರೆಸಿಸ್ಟೆನ್ಸ್ಗೆ ಎರಡು ವರ್ಷಕ್ಕೆ 6ಲಕ್ಷ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಚಿಕಿತ್ಸೆ ಪ್ರಾರಂಭವಾದ ಎರಡು ತಿಂಗಳ ನಂತರ ಕಫ ಪರೀಕ್ಷೆ ಮಾಡಲಾಗುತ್ತದೆ. ಗುಣಮುಖರಾಗದಿದ್ದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.
ವೈದ್ಯರ ಸಲಹೆಯಂತೆ ರೋಗಿಗಳು ಕೆಮ್ಮುವಾಗ ಬಟ್ಟೆ ಬಾಯಿಗೆ ಅಡ್ಡವಾಗಿರಿಸಿ, ಮಕ್ಕಳಜೊತೆ ಮಾತನಾಡುವುದನ್ನು ಮಟ್ಟಿಗೆ ಕಡಿಮೆಮಾಡಿದರೆ, ಬೇರೆಯವರಿಗೆ ಹರಡದಂತೆ ತಡೆಗಟ್ಟಬಹುದು.
ಚಿಕಿತ್ಸೆ ಅವಧಿಯಲ್ಲಿ ರೋಗಿಗಳಿಗೆ ಹಣ್ಣು, ಹಸಿರು ತರಕಾರಿ, ದಿನದ 3 ಹೊತ್ತು ಪೌಷ್ಟಿಕಾಂಶವಿರುವ ಆಹಾರದ ಅಗತ್ಯ. ಒಬ್ಬ ರೋಗಿ ನಿರ್ಲಕ್ಷ್ಯದಿಂದಾಗಿ 20 ಜನರಿಗೆ ರೋಗ ಹರಡಬಹುದಾಗಿದೆ. ಇದಕ್ಕೆ ಅವಕಾಶ ನೀಡಬಾರದು.
ಸರ್ಕಾರ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು, ಜತೆಗೆ ರೋಗದಿಂದ ಗುಣಮುಖರಾದವರ ಸಭೆ ಕರೆದು ಜಾಗೃತಿ ಮೂಡಿಸುತ್ತಿದೆ, ರೋಗವನ್ನು ತಡೆಗಟ್ಟಲು ಸರ್ಕಾರದ ಜತೆ ಎಲ್ಲಾ ನಾಗರೀಕರು ಕೈಜೋಡಿಸುವ ಅಗತ್ಯವಿದೆ. ತುಮಕೂರಿನಲ್ಲಿ ಒಂದು ಕುಟುಂದವನ್ನು ಪೂರ್ಣವಾಗಿ ಆವರಿಸಿದೆ.
ಜಾಗೃತಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಸಹಯೋಗದ ಕೊರತೆಯಿಂದಾಗಿ ಕ್ಷಯರೋಗ ನಿಯಂತ್ರಣದಲ್ಲಿ ಹಿನ್ನಡೆಯಾಗಿದೆ, ಜನಹಿತಕ್ಕಾಗಿ ಖಾಸಗಿ ಆಸ್ಪತ್ರೆಗಳು ಕೈಜೋಡಿಸುವ ಅವಶ್ಯಕತೆ ಇದೆ ಎಂದು ಐಪಿಎಚ್ನ ಡಾ. ವಿಜಯಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಮಾ.24 ವಿಶ್ವ ಕ್ಷಯರೋಗ ನಿರ್ಮೂಲನಾ ದಿನ
1882ರ ಮಾರ್ಚ್ 24 ರಂದು ಡಾ. ರಾಬರ್ಟ್ ಕೋಚ್ ಕ್ಷಯರೋಗ ಹರಡುವ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದರು. ಆ ದಿನವನ್ನು ವಿಶ್ವ ಕ್ಷಯರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ರೋಗದ ಲಕ್ಷಣವೇನು?
ನಿದ್ರೆ ಬಾರದಿರುವುದು
ಊಟ ರುಚಿಸದಿರುವುದು
ರಾತ್ರಿ ತೀವ್ರ ಜ್ವರ
ದೇಹದ ತೂಕ ವ್ಯತ್ಯಾಸ
ಕೆಮ್ಮಿದಾಗ ರಕ್ತಬರುವುದು
ಎದೆ ನೊವು,
ಉಸಿರಾಟ ತೊಂದರೆ
ನಿಶ್ಯಕ್ತಿ, ಸಂದಿನೋವು