ಪಾಪ ವಿಮೋಚನೆಗೆ ಬನವಾಸಿಗೆ ಹೋಗಿ
ಬೆಂಗಳೂರು: ಪಂಪ ಮಹಾ ಕವಿ ಹುಟ್ಟಿ ಬೆಳೆದ ಹಾಗೂ ಸಾಹಿತ್ಯಕ್ಕೆ ಪ್ರೇರಣೆಯಾದ ಬನವಾಸಿ ಬಗ್ಗೆ ಪಂಪ ಪ್ರಶಸ್ತಿ ಪಡೆದ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಹಾಗಾಗಿ ಇನ್ನಾದರೂ ಬನವಾಸಿಗೆ ಹೋಗಿ ಅಲ್ಲಿನ ಮಧುಕೇಶ್ವರನ ದರ್ಶನ ಪಡೆಯಿರಿ. ತಮ್ಮ ಪಾಪವಿಮೋಚನೆ ಮಾಡಿಕೊಳ್ಳಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ಸಲಹೆ ನೀಡಿದರು.
ಸುಚಿತ್ರ ಫಿಲಂ ಸೊಸೈಟಿಯಲ್ಲಿ ಭಾನುವಾರ ನಡೆದ ಬನವಾಸಿಯ ಶ್ರೀಧರ ಅವರ 'ದೇವರ ಜೋಳಿಗೆ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪಂಪ ಮಹಾಕವಿ ಹುಟ್ಟಿ ಬೆಳೆದ ಜಾಗವನ್ನು ನೆನೆಯದ ಮಂದಿಗೆ ಇಂದು ಪಂಪ ಪ್ರಶಸ್ತಿ ಸಿಗುತ್ತಿದೆ. ಕೊನೆಪಕ್ಷ ಪ್ರಶಸ್ತಿ ಪಡೆದವರಾದರೂ ಅತ್ತ ಸುಳಿಯದಿರುವುದು ವಿಷಾದನೀಯ. ಇಂದಿನ ಸಾಕಷ್ಟು ಸಾಹಿತಿಗಳಿಗೆ ಹಳೆಗನ್ನಡ, ಅಂದಿನ ಸಾಹಿತಿಗಳು, ಕವಿಗಳ ಬಗ್ಗೆ ತಿಳಿದಿಲ್ಲ ಹಾಗೂ ತಿಳಿಯಲು ಅವರಲ್ಲಿ ಆಸಕ್ತಿಯೂ ಇಲ್ಲ. ಹಾಗಾಗಿ ಮುಂದಿನ ತಿಂಗಳು ಮಧುಕೇಶ್ವರ ಜಾತ್ರೆ ನಡೆಯುತ್ತಿದ್ದು, ನಾನು ಸಹ ಅಲ್ಲಿಗೆ ಹೋಗುತ್ತೇನೆ. ಪಂಪ ಪ್ರಶಸ್ತಿ ಪಡೆದವರೂ ಜಾತ್ರೆಗೆ ಬಂದು ಪಾಪ ತೊಳೆದುಕೊಳ್ಳಿ ಎಂದರು.
ಇನ್ನು ಸಾಕಷ್ಟು ಮಂದಿ ಗಡ್ಡ ಬಿಟ್ಟಕೊಂಡು ಸ್ನಾನ ಮಾಡದೆ ಓಡಾಡಿಕೊಂಡಿದ್ದು, ನಾವು ದೊಡ್ಡ ಸಾಹಿತಿಗಳು, ಕಥೆಗಾರರು ಎಂದು ಭಾವಿಸುತ್ತಾರೆ. ಅದು ಅವರ ತಪ್ಪು ಕಲ್ಪನೆ. ಗಡ್ಡ ಬಿಟ್ಟು ಸ್ನಾನ ಮಾಡದೆ ಇರುವವರೆಲ್ಲ ಕಥೆಗಾರರಾಗಲು ಸಾಧ್ಯವಿಲ್ಲ.
ಉತ್ತಮ ಕಥೆಗಾರರಾಗಲು ಗ್ರಹಿಕೆ, ಪರಿಕರ, ವಸ್ತುಗಳನ್ನು ನೋಡುವ ಕ್ರಮ ಮುಖ್ಯವಾದುವು. ಎಲ್ಲಾ ಕ್ಷೇತ್ರದಲ್ಲೂ ಅರಿವು, ಪ್ರಪಂಚ ಜ್ಞಾನ ಇರಬೇಕು. ಹಳೆಗನ್ನಡ, ಅಂದಿನ ಕಾವ್ಯಗಳ ಅಧ್ಯಯನ ಮಾಡಿದಾಗ ಹೊಸ ಪ್ರಪಂಚ ಸೃಷ್ಟಿಯಾಗುತ್ತದೆ ಎಂದು ಕುಂ. ವೀರಭದ್ರಪ್ಪ ನುಡಿದರು.
ನಿರಂತರ ಓದು ಒಂದು ರೀತಿ ಧ್ಯಾನವಿದ್ದಂತೆ. ಅದಕ್ಕಾಗಿ ಯಾವ ಆಶ್ರಮಕ್ಕೂ ಹೋಗಬೇಕಿಲ್ಲ. ಉತ್ತಮ ಕೃತಿಗಳನ್ನು ಓದುವ ಮೂಲಕ ನಮ್ಮೊಳಗಿನ ಚೇತನವನ್ನು ಪುನಶ್ಚೇತನಗೊಳಿಸಬೇಕು. ಹಾಗಾದಲ್ಲಿ ಯುವಜನಾಂಗದಿಂದ ಮಾತ್ರ ಸಾಹಿತ್ಯ ಕ್ಷೇತ್ರ ಕಟ್ಟಿ ಬೆಳೆಸಲು ಹಾಗೂ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ಇಂದು ಕನ್ನಡದಲ್ಲಿ ಬರಹಗಾರರ ಕೊರತೆ ಸಾಕಷ್ಟಿದೆ. ಸಿನಿಮಾ ಕ್ಷೇತ್ರದಲ್ಲಿ ಬರವಣಿಗೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದರೆ, ಕಿರುತೆರೆ ಕ್ಷೇತ್ರದಲ್ಲಿ ಬರಹದಿಂದ ಸಾಕಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್, ನಟಿ ಅಪರ್ಣಾ ವಸ್ತಾರೆ, ಕರ್ತೃ ಶ್ರೀಧರ ಬನವಾಸಿ (ಫಕೀರ) ಇದ್ದರು.
ಮೂರ್ತಿ, ಭೈರಪ್ಪರಿಗಿಂತ ದೇವನೂರು ಶ್ರೇಷ್ಠ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರಿಗಿಂತ ದೇವನೂರು ಮಹಾದೇವ ಅವರು ಶ್ರೇಷ್ಠ ಕಾದಂಬರಿಕಾರರು ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು. ಅಲಹಾಬಾದ್ನಲ್ಲಿ ಕಾಶಿನಾಥ್ ಸಿಂಗ್ ಎಂಬ ಬರಹಗಾರರಿದ್ದು, ಅವರನ್ನು ಭೇಟಿಯಾದಾಗ ಕನ್ನಡದಲ್ಲಿ ಯು.ಆರ್. ಅನಂತಮೂರ್ತಿ, ಭೈರಪ್ಪ ಅವರು ದೊಡ್ಡ ಸಾಹಿತಿಗಳಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಅನಂತಮೂರ್ತಿ ಮತ್ತು ಭೈರಪ್ಪ ಅವರಿಗಿಂತ ದೇವನೂರು ಮಹಾದೇವ, ರಾಘವೇಂದ್ರ ಖಾಸನೀಸ್ರಂತಹ ದೊಡ್ಡ ಸಾಹಿತಿಗಳಿದ್ದಾರೆ ಎಂಬ ಉತ್ತರ ನೀಡಿದೆ. ರಾಘವೇಂದ್ರ ಅವರು ರಚಿಸಿರುವ 'ತಬ್ಬಲಿ' ಕಥೆ ಭಾರತದಲ್ಲೇ ಶ್ರೇಷ್ಠ ಕಥೆಗಳಲ್ಲಿ ಒಂದು. ಇದು ಸದಾ ಕಾಡುವಂತ ಕಥೆ. ಮಹಾದೇವ ಅವರ ಸಾಹಿತ್ಯ ಪರಭಾಷೆಗಳಿಗೆ ಅನುವಾದ ಆಗದಿರಲು ಕಾರಣ, ಅವರು ಪರಭಾಷಾ ಲೇಖಕರಿಗೆ ಪರಿಚಯವಿಲ್ಲ. ಹಾಗಾಗಿ ಅವರು ತನ್ನ ಶ್ರೇಷ್ಠತೆಗಳನ್ನು ಉಳಿಸಿಕೊಂಡಿವೆ. ಅದಕ್ಕೆ ಅವರು ಶ್ರೇಷ್ಠ ಕಥೆಗಾರರು ಎಂದರು.