ರಸ್ತೆಯಲ್ಲಿ ಕಸದ ರಾಶಿ...ರಾಶಿ
ಚನ್ನಪಟ್ಟಣದ 23ನೇ ವಾರ್ಡಿನಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಯದೆ ರಸ್ತೆಯಲ್ಲಿ ಕಸದ ರಾಶಿ ಹರಡಿ ಸ್ಥಳೀಯ ನಿವಾಸಿಗಳು ದಿನ ನಿತ್ಯ ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಗೊಂಡಿದೆ.
ಇದು ಕೇವಲ ಇದೊಂದೆ ವಾರ್ಡಿನ ಸಮಸ್ಯೆಯಾಗದೆ ಪಟ್ಟಣದ ಹಲವಾರು ವಾರ್ಡುಗಳಲ್ಲಿ ಇಂತಹುದೇ ಸಮಸ್ಯೆ ಉಲ್ಬಣಗೊಂಡಿದೆ. ನಗರಸಭೆ ವತಿಯಿಂದ ಪ್ರತಿದಿನ ತ್ಯಾಜ್ಯ ಸಂಗ್ರಹಣೆ ಮಾಡಿ, ಹೊರವಲಯದಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ವಿಲೇವಾರಿ ಮಾಡಬೇಕಿದೆಯಾದರೂ ನಗರಸಭೆ ಸಿಬ್ಬಂದಿಗಳ ಉದಾಸೀನತೆಯಿಂದಾಗಿ ಪಟ್ಟಣದ ನೈರ್ಮಲ್ಯ ನಿರ್ವಹಣೆ ಹಳಿತಪ್ಪಿದ್ದು ಬೊಂಬೆನಗರಿ ಗಬ್ಬೆದ್ದು ನಾರುತ್ತಿದೆ.
ತ್ಯಾಜ್ಯ ಸಂಗ್ರಹಣೆಗಾಗಿ 20 ಲಕ್ಷರು. ವೆಚ್ಚದಲ್ಲಿ ಹೊಸದಾಗಿ ಕಂಟೇನರ್ ಖರೀದಿ ಮಾಡಲಾಗಿದೆ.
ಇದರೊಂದಿಗೆ ನಗರಸಭೆಯ ಟ್ರ್ಯಾಕ್ಟರ್‌ಗಳು, ಮಿನಿ ಆಟೋಗಳು, ತಳ್ಳುಗಾಡಿಗಳು ಬಳಕೆಯಾಗುತ್ತಿದ್ದು ಘನತ್ಯಾಜ್ಯ ಸಂಗ್ರಹಕ್ಕೆಂದು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮೂಲಕ ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಆದರೆ ಈ ರೀತಿ ಸಂಗ್ರಹಿಸಿದ ತ್ಯಾಜ್ಯವನ್ನು ಬಡಾವಣೆಗಳ ಖಾಲಿ ಸ್ಥಳದಲ್ಲಿ ವಿಲೇ ಗುಡ್ಡೆಹಾಕುತ್ತಿದ್ದು ಇದನ್ನು ಕಾಲಕಾಲಕ್ಕೆ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಕಸದ ಗುಡ್ಡೆ ಗಬ್ಬೆದ್ದು ನಾರುತ್ತಿದ್ದು ಇದರಿಂದಾಗಿ ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಕೆಲವಾರ್ಡ್‌ಗಳಲ್ಲಿ ಗುಡ್ಡೆಹಾಕುವ ಕಸದ ರಾಶಿಯನ್ನು ವಾರಕಳೆದರೂ ವಿಲೇವಾರಿ ಮಾಡದಿದ್ದು, ಬೀದಿ ತುಂಬಾ ಚೆಲ್ಲಾಡುವ ಕಸ, ಸೊಳ್ಳೆ, ನೊಣ ಮೊದಲಾದ ಕ್ರಿಮಿ ಕೀಟಗಳು ಹೆಚ್ಚಳವಾಗಲು ಕಾರಣವಾಗಿದ್ದು ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇನ್ನಾದರೂ ನಗರಸಭೆ ಆರೋಗ್ಯ ಶಾಖೆ ಪಟ್ಟಣದ ನೈರ್ಮಲ್ಯ ನಿರ್ವಹಣೆಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಗರ್ಭಿಣಿಯರ ಪರದಾಟ
ಕನಕಪುರ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸೌಲಭ್ಯಗಳ ಕೊರತೆಯಿಂದ ಗರ್ಭಿಣಿಯರು ಪರದಾಡುವಂತಾಗಿದೆ. ಪ್ರತಿನಿತ್ಯ 50-60 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದು ಕೇವಲ ನಾಲ್ಕೈದು ಮಂದಿ ಸಿಬ್ಬಂದಿಗಳಿದ್ದು ಅಗತ್ಯ ಚಿಕಿತ್ಸೆ ನೀಡಲಾಗುತ್ತಿಲ್ಲ. ತಾಲೂಕಿನ ಅತ್ಯಂತ ಹಿರಿಯ ಆಸ್ಪತ್ರೆ ಆಗಿದ್ದರೂ ಸಿಬ್ಬಂದಿ ಕೊರತೆ ನಿರಂತರವಾಗಿ ಕಾಡುತ್ತಿದೆ.
ಆಸ್ಪತ್ರೆಗೆ ಒಟ್ಟಾರೆ 16 ಮಂದಿ ಸಿಬ್ಬಂದಿಯ ಅಗತ್ಯವಿದ್ದು ಪ್ರಸ್ತುತ ಮೂರು ಮಂದಿ ಮಹಿಳಾ ವೈದ್ಯರು ಪ್ರಸೂತಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಒಬ್ಬರು ಅನಾರೋಗ್ಯ ರಜೆಯಲ್ಲಿದ್ದರೆ, ಇನ್ನೊಬ್ಬರು ದೀರ್ಘಕಾಲದ ರಜೆಯಲ್ಲಿದ್ದಾರೆ. ಇರುವ ಒಬ್ಬರು ವೈದ್ಯರಿಗೆ ಎಲ್ಲಾ ಪ್ರಸೂತಿ ಪ್ರಕರಣಗಳನ್ನು ನಿರ್ವಹಿಸಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಂದು ಶಸ್ತ್ರ ಚಿಕಿತ್ಸಾ ಕೊಠಡಿಯಿದ್ದು ತುರ್ತಾಗಿ ಇನ್ನೊಂದು ಕೊಠಡಿಯ ಅಗತ್ಯವಿದೆ. ದಾದಿಯರು ಹಾಗೂ ಸೇವಕರ ಕೊರತೆಯೂ ಇದೆ. ರಾಜ್ಯದಲ್ಲಿಯೇ ಬೃಹತ್ ತಾಲೂಕೆಂದು ಹೆಸರಾಗಿರುವ ಕನಕಪುರ ತಾಲೂಕಿನ ಬಹುತೇಕ ಗರ್ಭಿಣಿಯರ ಅತ್ಯಗತ್ಯವಾಗಿರುವ ಈ ಆಸ್ಪತ್ರೆಗೆ ತಕ್ಷಣವೇ ಕಾಯಕಲ್ಪ ಅಗತ್ಯವಾಗಿದೆ. ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಾಂಕ್ರಾಮಿಕ ರೋಗ ಹರಡುವ ಭೀತಿ
ರಾಮನಗರದಲ್ಲಿರುವ ಹೊಟೇಲ್‌ಗಳು, ಟೀ ಸ್ಟಾಲ್ ಮತ್ತು ಜ್ಯೂಸ್ ಅಂಗಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.
ಬೇಸಿಗೆ ವೇಳೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಇಂತಹ ಹೋಟೆಲ್,
ಟೀ ಸ್ಟಾಲ್ ಮತ್ತು ಜ್ಯೂಸ್ ಅಂಗಡಿಗಳಲ್ಲಿ ಲೋಟ, ತಟ್ಟೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸರಿಯಾಗಿ ಶುಚಿಗೊಳಿಸುವುದಿಲ್ಲ. ಅಲ್ಲದೆ ಫಿಲ್ಟರ್ ಅಳವಡಿಸಿದ ನೀರು ಅಥವಾ ಬಿಸಿನೀರು ನೀಡುತ್ತಿಲ್ಲ.
ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಗಮನ ಹರಿಸುವುದಿಲ್ಲ. ಇವೆಲ್ಲವೂ ಗ್ರಾಹಕರಿಗೆ ದುಡ್ಡು ಕೊಟ್ಟು ರೋಗ ಖರೀದಿಸುವಂತಾಗಿದೆ. ಟೀ ಸ್ಟಾಲ್ ಮತ್ತು ಜ್ಯೂಸ್ ಅಂಗಡಿಗಳಲ್ಲಿ ಲೋಟಗಳನ್ನು ಶುದ್ಧ ನೀರಿನಿಂದ ಶುಚಿಗೊಳಿಸುತ್ತಿಲ್ಲ. ಅಶುದ್ಧ ನೀರಿನಲ್ಲಿ ಪದೇ ಪದೇ ತೊಳೆಯುವುದಲ್ಲದೆ, ಜ್ಯೂಸ್ ತಯಾರಿಸಲೂ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ.
ಶುಚಿತ್ವ ಕಾಪಾಡದ ಅಂಗಡಿಗಳ ಬಗ್ಗೆ ನಿಗಾ ವಹಿಸಬೇಕಿದ್ದ ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳಾಗಲೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಾಗಲೀ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಇಂತಹ ಹೊಟೇಲ್ ಮತ್ತು ಅಂಗಡಿಗಳಿಗೆ ಹಠಾತ್ ದಾಳಿ ನಡೆಸಬೇಕು. ಶುಚಿತ್ವ ಕಾಪಾಡಿಕೊಳ್ಳದಂತಹ ಹೊಟೇಲ್ ಮತ್ತು ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ
ಕಾನೂನು ಕ್ರಮಕ್ಕೆ ಮುಂದಾಗಬೇಕು. ಆ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹ.