ಸರ್ಕಾರ ಬಿಎಂಶ್ರೀ ಹೆಸರಲ್ಲಿ ಪ್ರಶಸ್ತಿ ನೀಡಲಿ
ಕ.ಪ್ರ.ವಾರ್ತೆ ಬೆಂಗಳೂರು ಮಾ.23
ಬಿ.ಎಂ.ಶ್ರೀ. ಹೆಸರಿನಲ್ಲಿ ಪ್ರಶಸ್ತಿ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಸರ್ಕಾರ ಮಾಡದಿದ್ದರೂ ಅವರ ಮೊಮ್ಮಗಳಾದ ಕಮಲಿನಿ ಬಾಗೂರ ಮಾಡಿದ್ದಾರೆ ಎಂದು ನಿಘಂಟುತಜ್ಞ ನಾಡೋಜ ಜಿ. ವೆಂಕಟಸುಬ್ಬಯ್ಯ ಹೇಳಿದರು.
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದಿಂದ ದಿ ಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 'ಶ್ರೀ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿ.ಎಂ.ಶ್ರೀ. ಕನ್ನಡದ ಉದ್ಧಾರವನ್ನು ತಮ್ಮ ಜೀವನದ ಉದ್ದೇಶವನ್ನಾಗಿ ಇಟ್ಟುಕೊಂಡಿದ್ದರು. ವೈಯಕ್ತಿಕ ಜೀವನದ ಅನೇಕ ಕಷ್ಟಗಳನ್ನು ಕನ್ನಡದ ಕೆಲಸ ಮಾಡುವ ಮೂಲಕ ಮರೆಯುತ್ತಿದ್ದರು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿದ್ದಾಗ ಬಿ.ಎಂ.ಶ್ರೀ. ಮಹಾರಾಜ ಕಾಲೇಜಿಗೆ ಬಂದು ಉಪನ್ಯಾಸ ನೀಡುತ್ತಿದ್ದರು. ಅವರ ಪಾಠ ಕಾವ್ಯಗಳಂತೆ ಸೊಗಸಾಗಿರುತ್ತಿತ್ತು. ಎಲ್ಲಾ ಹಳೆಗನ್ನಡ ಗ್ರಂಥಗಳನ್ನು ಅರ್ಥೈಸಿಕೊಂಡಿದ್ದರು. ಪಂಪನ ಕಠಿಣ ಗ್ರಂಥಗಳನ್ನು ಅವರು ನಮ್ಮ ಮುಂದೆ ಓದಿದರೆ ಸಾಕು ಅರ್ಥವಾಗುತ್ತಿತ್ತು ಎಂದರು.
'ಶ್ರೀ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ನನಗೆ ಸಿಕ್ಕ ಪ್ರಶಸ್ತಿಗಳಲ್ಲಿ ಅಮೂಲ್ಯ ಪ್ರಶಸ್ತಿ ಇದು. ಬಿ.ಎಂ.ಶ್ರೀ. ಹೊಸಗನ್ನಡ ಸಾಹಿತ್ಯದಲ್ಲಿ ಯುಗಪುರುಷ. ಅವರ ಕನ್ನಡದ ಸೇವೆ ಅಮೋಘ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಆರಂಭವಾಗಲು ಬಿ.ಎಂ.ಶ್ರೀ. ಅವರು ಕಾರಣ ಎಂದು ಹೇಳಿದರು. ಅವರು ಅದ್ಭುತ ವಾಗ್ಮಿಯಾಗಿದ್ದರು. ಅವರ ಉಪನ್ಯಾಸ ಕೇಳಲು ವಿದ್ಯಾರ್ಥಿಗಳು ಕಿಕ್ಕಿರಿಯುತ್ತಿದ್ದರು. ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವಿತ್ತು.
ಅದನ್ನು ಮರೆತು ಕನ್ನಡಕ್ಕಾಗಿ ಶ್ರಮಿಸಿದರು. ಅವರ ಹೆಸರಿನಲ್ಲಿ ಸರ್ಕಾರ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಬಹುದಿತ್ತು. ಆದರೆ ಆ ಕೆಲಸವಾಗಿಲ್ಲ. ಅವರ ಮೊಮ್ಮಗಳು ಈ ಕಾರ್ಯ ಮಾಡುತ್ತಿದ್ದಾರೆ ಎಂದರು.
ವಿಮರ್ಶಕ ಡಾ.ಜಿ.ಎಸ್. ಅಮೂರ ಮಾತನಾಡಿ, ಬಿ.ಎಂ.ಶ್ರೀ. ಹೊಸ ಕವಿಗಳಿಗೆ ಅನೇಕ ಮಾರ್ಗ ತೆರೆದಿದ್ದಾರೆ. ಕನ್ನಡದ ಯುವಕವಿಗಳು ಕೂಡ ಅವರ ಪ್ರಭಾವದಿಂದ ತಪ್ಪಿಸಿಕೊಳ್ಳಲಿಲ್ಲ. ಬಿ.ಎಂ.ಶ್ರೀ. ಕನ್ನಡ ಭಾಷೆ ಭವಿತವ್ಯದ ಬಗ್ಗೆ ಪ್ರಾಮಾಣಿಕವಾಗಿ ದುಡಿದರು. ಶ್ರೇಷ್ಠ ಅನುವಾದಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ವಿಮರ್ಶಕ ಪ್ರೊ.ಎಂ.ಎಚ್ ಕೃಷ್ಣಯ್ಯ ಮಾತನಾಡಿ, ಲಕ್ಷ್ಮೀನಾರಾಯಣ ಭಟ್ಟರು ವಿಮರ್ಶೆ ಮೀರಿ ನಿಂತವರು. ಅವರು ಕನ್ನಡಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಬಿ.ಎಂ.ಶ್ರೀಯವರು ಪರಂಪರೆ ಬಗ್ಗೆ ಹೊಸ ವ್ಯಾಖ್ಯಾನ ನೀಡಿದ ಏಲಿಯಟ್ನ ಕಾವ್ಯಗಳನ್ನು ಕನ್ನಡಕ್ಕೆ ನೀಡಿದರು. ಭಟ್ಟರು ಸೊಗಸಾಗಿ ಹಾಡಲು ಸಾಧ್ಯವಾಗುವ ಉತ್ತಮ ಗೀತೆಗಳನ್ನು ಕನ್ನಡಕ್ಕೆ ನೀಡಿದ್ದಾರೆ ಎಂದರು.