ಜಾಗತೀಕರಣದಿಂದ ರಂಗಭೂಮಿ ನಾಶ
ನೆಲಮಂಗಲ: ಜಾಗತೀಕರಣದಿಂದಾಗಿ ರಂಗಭೂಮಿ ನಶಿಸುತ್ತಿದೆ. ಅದರ ಉಳಿವಿಗಾಗಿ ರಂಗಕರ್ಮಿಗಳು ಹಾಗೂ ರಂಗ ಕಲಾವಿದರು ದುಡಿಯಬೇಕು ಎಂದು ಶ್ರೀ ಸಿದ್ದಗಂಗಾ ಕಾಲೇಜಿನ ಉಪನ್ಯಾಸಕ ಗಂಗರಾಜು ಹೇಳಿದರು.
ಅವರು ಸೋಮವಾರ ಪಟ್ಟಣದ ಸುಭಾಷ್ನಗರ, ವಿಜಯನಗರದ ಶ್ರೀ ಗಣಪತಿ ಸಭಾಂಗಣದಲ್ಲಿ ಪ್ರತಿಭಾ ರಂಗದ ವತಿಯಿಂದ ಹಿರಿಯ ರಂಗಭೂಮಿ ನಿರ್ದೇಶಕ ಹಾಗೂ ಧಾರವಾಹಿ ನಟ ಬಿ.ರಾಮಯ್ಯ ಅವರ ಮೂಗುದ್ದ ಎಂಬ ರಾಜಕೀಯ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸರ್ಕಾರದ ವತಿಯಿಂದ ರಂಗ ಕರ್ಮಿಗಳಿಗೆ ಸಿಗಬೇಕಾದ ಸವಲತ್ತು ಹಾಗೂ ಅನುಕೂಲತೆ ಕೊಡಿಸಿ ಕೊಡುವುದಾಗಿ ತಿಳಿಸಿದರು. ರಂಗ ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸಿದಾಗ ಮಾತ್ರ ಬೆಳೆದು ಹೆಮ್ಮರವಾಗಲು ಸಾಧ್ಯ. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ನಟ ಬಿ.ರಾಮಯ್ಯ ಮಾತನಾಡಿ ಜನತೆ ಸಿನಿಮಾ ರಂಗಕ್ಕೆ ನೀಡುವ ಪ್ರಾಶಸ್ತ್ಯದ ಅರ್ಧಭಾಗ ಜೀವಂತ ಕಲೆಗಳಿಗೆ ನೀಡಿದರೆ ರಂಗ ಕರ್ಮಿ ಕಲಾವಿದರು ಅತಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದ್ದ ಪೌರಾಣಿಕ ನಾಟಕಗಳು ಕಣ್ಮರೆಯಾಗುತ್ತಿರುವುದು ಒಂದು ದುರಂತ. ರಂಗ ಕರ್ಮಿಗಳಿಗೆ ತಮ್ಮ ಕಲಾ ಪ್ರದರ್ಶನಕ್ಕೆ ಸೂಕ್ತ ಸ್ಥಳ ಹಾಗೂ ಅವಕಾಶಗಳು ಸಿಕ್ಕರೆ ಕಲೆ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.