ಮುತ್ತಿನ ಪಲ್ಲಕ್ಕಿ ಮಹೋತ್ಸವ
ಕನಕಪುರ: ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಭಕ್ತಮಂಡಳಿ ವತಿಯಿಂದ 43ನೇ ವರ್ಷದ ಮುತ್ತಿನ ಪಲ್ಲಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಪಲ್ಲಕಿ ಉತ್ಸವದಲ್ಲಿ ಶ್ರೀರಾಮಾಂಜನೇಯ,ಶ್ರೀರೇಣುಕಾ ಎಲ್ಲಮ್ಮ, ಶ್ರೀಪ್ರಸನ್ನ ಪಾರ್ವತೀದೇವಿ, ಶ್ರೀಮೂಕಾಂಬಿಕಾದೇವಿ ಉತ್ಸವದ ಮೆರವಣಿಗೆಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದವು. ಸಂಘದ ಎಚ್.ಎನ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಜಾನಪದ ಕಲಾಮೇಳ ಮೆರವಣಿಗೆಗೆ ಆಕರ್ಷಣೆ ನೀಡಿತ್ತು. ವಿಶೇಷವಾದ ನಾಯಂಡಿ ಕುಣಿತ, ನಾಯಂಡಿ ವಾದ್ಯ, ಮೈಸೂರು ನಗಾರಿ, ಡೊಳ್ಳು ಕುಣಿತ, ಕೀಲುಕುದುರೆ,ಪೂಜಾಕುಣಿತ, ಪಟದಕುಣಿತ ತಂಡಗಳು ಪಾಲ್ಗೊಂಡಿದ್ದವು.