ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಾನು ಆಯ್ಕೆಯಾದ ನಂತರ ಸಿಕ್ಕ ಅಲ್ಪ ಅವಧಿಯಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದರ ಜತೆಗೆ, ಜನರ ಅಹವಾಲು ಆಲಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಸಂಸದೆ, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಹೇಳಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಮತಯಾಚಿಸಿದ ನಂತರ ಮುಖ್ಯವೃತ್ತದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಳೆದ 10 ತಿಂಗಳ ಅವಧಿಯ ಜನಪರ ಕೆಲಸ ಹಾಗೂ ಅಭಿವೃದ್ಧಿ ಯೋಜನೆಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕಳೆದ ಉಪಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿ ನನಗೆ ಅವಕಾಶ ಕಲ್ಪಿಸಿದಂತೆ ಈ ಬಾರಿಯೂ ಕೆ.ಆರ್. ನಗರ ತಾಲೂಕಿನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮತ್ತೊಂದು ಅವಧಿಗೆ ನಾನು ಆಯ್ಕೆಯಾಗಿ ನಿಮ್ಮೆಲ್ಲರ ಸೇವೆ ಮಾಡುವ ಸದಾವಕಾಶ ನೀಡಿ ಎಂದು ಕೋರಿದರು.
ನಂತರ ಸಂಸದರು ಚುಂಚನಕಟ್ಟೆ ಹೋಬಳಿಯ ಆರು ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪೇರು, ಜಿಪಂ ಮಾಜಿ ಸದಸ್ಯರಾದ ಡಿ.ರವಿಶಂಕರ್, ಎಚ್.ಎಸ್. ದೇವರಾಜು, ಎಪಿಎಂಸಿ ನಿರ್ದೇಶಕ ಎಚ್.ಎನ್. ರಾಜೇಗೌಡ, ಮಾಜಿ ನಿರ್ದೇಶಕ ರಾಜಶೇಖರ, ತಾಲೂಕು ಹಿಂದುಳಿದ ವರ್ಗಗಗಳ ಒಕ್ಕೂಟಗಳ ಅಧ್ಯಕ್ಷ ಜಿ.ಎಂ. ಹೇಮಂತ್, ಕಾರ್ಯದರ್ಶಿ ಅರುಣ್ಕುಮಾರ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಆನಂದ್, ಎಚ್.ಎಸ್. ಶ್ರೀನಿವಾಸ್, ನಿರ್ದೇಶಕ ಪ್ರಭಾಕರ, ಗ್ರಾಪಂ ಮಾಜಿ ಸದಸ್ಯರಾದ ಎಚ್.ಜೆ. ರಮೇಶ್, ಎಚ್.ಎಸ್. ರವಿ, ಕಾಂಗ್ರೆಸ್ ಮುಖಂಡರಾದ ಕುಮಾರ್, ಶಿವಮಾದು ಇದ್ದರು.