ಅಖಾಡದಲ್ಲಿ 16 ಮಂದಿ ಹುರಿಯಾಳುಗಳು
ಕ.ಪ್ರ.ವಾರ್ತೆ ರಾಮನಗರ ಮಾ.26
ಜಿದ್ದಾಜಿದ್ದಿನ ಅಖಾಡವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ಒಟ್ಟಾರೆ 16 ಅಭ್ಯರ್ಥಿಗಳು 29 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಡೆಯ ದಿನವಾದ ಬುಧವಾರ 6 ಮಂದಿ ಉಮೇದುವಾರಿಕೆ ಅರ್ಜಿ ಹಾಕಿದರು.
ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರು ಬಲಪ್ರದರ್ಶನಕ್ಕಾಗಿ ಮೆರವಣಿಗೆಯೊಂದಿಗೆ ಆಗಮಿಸಿ ಮತ್ತೆರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರೆ, ಎಎಪಿ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಕೂಡ ಇನ್ನೊಮ್ಮೆ ನಾಮಪತ್ರ ಹಾಕಿದ್ದಾರೆ.
ಜೈ ವಿಜಯ್ ಭಾರತಿ ಪಾರ್ಟಿಯ ಶಂಕರಪ್ಪ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಬಸವೇಗೌಡ, ಬಹುಜನ ಸಮಾಜ ಪಕ್ಷದ ಸಿ.ತೋಪಯ್ಯ, ಹಿಂದೂಸ್ಥಾನ ಜನತಾ ಪಾರ್ಟಿಯ ಎಂ.ಪಿ.ಮುನಾವರ್ ಷರೀಫ್, ಪಕ್ಷೇತರರಾದ ಸಿದ್ದರಾಮ ಹೆಗ್ಗಡೆ, ಸುರೇಶ್ ಕೂಡ ನಾಮಪತ್ರ ಸಲ್ಲಿಸಿದರು.
ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 15 ಮತ್ತು ಉಪ ಚುನಾವಣೆಯಲ್ಲಿ 13 ಮಂದಿ ಕಣದಲ್ಲಿ ಉಳಿದಿದ್ದರು. ಈ ಬಾರಿ 16 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗೆ ಅಶೋಕ್ ಸಾಥ್
ಕಳೆದ ಗುರುವಾರವೇ ಬಿ ಫಾರಂ ಸಮೇತ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಹುರಿಯಾಳು ಪಿ.ಮುನಿರಾಜುಗೌಡ ಅವರು ಪಕ್ಷದ ನಾಯಕರು ಮತ್ತು ಸಹಸ್ರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಮತ್ತೆ ನಾಮಪತ್ರ ಸಲ್ಲಿಸಿದರು.
ಈ ಮೊದಲು ನಾಮಪತ್ರ ಸಲ್ಲಿಕೆ ವೇಳೆ ಸ್ಥಳೀಯ ಮುಖಂಡರಷ್ಟೇ ಹಾಜರಿದ್ದರು. ಇಂದು ಅಭ್ಯರ್ಥಿ ಜತೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ನಾರಾಯಣಸ್ವಾಮಿ, ಶಾಸಕ ಎಂ.ಕೃಷ್ಣಪ್ಪ, ಕಿರುತೆರೆ ನಟಿ ಮಾಳವಿಕಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಗರದ ಹಳೆಯ ಬಸ್ ನಿಲ್ದಾಣದಿಂದ ಹೊರಟ ಬಿಜೆಪಿ ಮೆರವಣಿಗೆಯುದ್ದಕ್ಕೂ ಆ ಪಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಜಯಘೋಷ ಮೊಳಗಿತು. ಕಾರ್ಯಕರ್ತರು ಪಕ್ಷದ ಕಮಲ ಗುರುತಿನ ಟೋಪಿ ಧರಿಸಿ, ಬಾವುಟ ಹಿಡಿದು ಸಾಗಿದರು.
ಈ ಬಾರಿ ಮೋದಿ ಸರ್ಕಾರ: ಬಿಜೆಪಿ ಅಭ್ಯರ್ಥಿ ಮತ್ತು ಮುಖಂಡರು ಮೆರವಣಿಗೆಯಲ್ಲಿ ಸಾಗಿದ ವಾಹನದ ಮೇಲೆ ಈ ಬಾರಿ ಮೋದಿ ಸರ್ಕಾರ ಎನ್ನುವ ಘೋಷಣಾ ಫಲಕ ಎದ್ದು ಕಾಣುತ್ತಿತ್ತು. ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್‌ಗಿಂತ ತಾವೇನು ಕಮ್ಮಿಯಿಲ್ಲ ಎನ್ನುವಂತೆ ಬಿಜೆಪಿ ಕಾರ್ಯಕರ್ತರೂ ಹುರುಪಿನಿಂದ ಕಾಣಿಸಿಕೊಂಡರು.