ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟ್ರ್ಯಾಕ್ಟರ್ ಕೆಳಗಿಂದ ಬಿದ್ದು ಕೂಲಿ ಕಾರ್ಮಿಕ ಸಾವು

Rashmi Kasaragodu
Updated On : 27 Mar 2014, 1:09 am

ಸೂಲಿಬೆಲೆ: ನಂದಗುಡಿ ಪೊಲೀಸ್ ಠಾಣೆಯ ತರಬಹಳ್ಳಿ ಬಳಿ  ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು ಕೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಹೊಸೂರು ಗ್ರಾಮದ ವೆಂಕಟಗಿರಿಯಪ್ಪ (50) ಸಾವನ್ನಪ್ಪಿರುವ ಕೂಲಿಕಾರ. ಹೆಚ್.ಕ್ರಾಸ್‌ನಲ್ಲಿ ಕೆಲಸ ಮುಗಿಸಿಕೊಂಡು ನಂದಗುಡಿಯತ್ತ ಟ್ರ್ಯಾಕ್ಟರ್‌ನಲ್ಲಿ ಕೂಲಿಕಾರರು ಒಟ್ಟಾಗಿ ಬರುತ್ತಿರುವಾಗ ಕೆಳಗೆ ಬಿದ್ದ ವೆಂಕಟಗಿರಿಯಪ್ಪನ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಸಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶಾರ್ಟ್ ಸರ್ಕೀಟ್‌ನಿಂದ ಬೆಂಕಿ: ನಷ್ಟ
ಚನ್ನಪಟ್ಟಣ: ವಿದ್ಯುತ್ ಷಾರ್ಟ್ ಸರ್ಕ್ಯೂಟ್‌ನಿಂದಾಗಿ ಗೋದಾಮಿಗೆ ಬೆಂಕಿತಗುಲಿ ಅಲ್ಲಿದ್ದ ಪ್ಲಾಸ್ಟಿಕ್ ಕಾಗದಗಳು ಸುಟ್ಟು ಹೋಗಿರುವ ಘಟನೆ ಪಟ್ಟಣದ ಮೆಹಂದಿ ನಗರದಲ್ಲಿ ಬುಧವಾರ ನಡೆದಿದೆ. ಸೈಯದ್ ನೂರುಲ್ಲಾ ಎಂಬುವರಿಗೆ ಸೇರಿದ ತಾಜ್ ಪೇಪರ್ಸ್ ಎಂಬ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರಿಗೆ ಸುದ್ದಿ ತಿಳಿದು ಬೆಂಕಿ ನಂದಿಸುವ ವೇಳೆಗೆ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸಾವಿರಾರು ರು. ಮೌಲ್ಯದ ಪ್ಲಾಸ್ಟಿಕ್ ಬೆಂಕಿಗೆ ಆಹುತಿಯಾಗಿದೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ನಂದಿಸಲು ಹೋದ ವೃದ್ಧ ಸಾವು
ದೊಡ್ಡಬಳ್ಳಾಪುರ: ನೀಲಗಿರಿ ತೋಪಿಗೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ವೃದ್ಧರೊಬ್ಬರು ಬೆಂಕಿ ಕೆನ್ನಾಲಗೆಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ದೊಡ್ಡತುಮಕೂರಿನ ನಿವಾಸಿ ಪುಟ್ಟಪ್ಪ (70) ಎಂದು ಗುರುತಿಸಲಾಗಿದೆ. ತೋಪಿನಲ್ಲಿ ಬೆಳೆದಿದ್ದ ಹುಲ್ಲನ್ನು ಕೊಯ್ಲು ಮಾಡಲು ಹೋದ ಸಂದರ್ಭದಲ್ಲಿ ತೋಪಿಗೆ ಬೆಂಕಿ ಬಿದ್ದಿತ್ತು. ಬೆಂಕಿ ನಂದಿಸಲು ಮುಂದಾದ ಪುಟ್ಟಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಗುಲದಲ್ಲಿ ಆಭರಣ ಕಳವು
ದೊಡ್ಡಬಳ್ಳಾಪುರ: ತಾಲೂಕಿನ ಗಡಿಭಾಗದಲ್ಲಿರುವ ಜುಟ್ಟನಹಳ್ಳಿ ಗ್ರಾಮದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದಲ್ಲಿ ಸುಮಾರು 1 ಕೆಜಿ ಬೆಳ್ಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement