ರಣರಂಗದಿಂದ ಸೇನಾಧಿಪತಿಯೇ ಪಲಾಯನ: ಆರ್. ಅಶೋಕ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಮಾ.26
ರಣರಂಗದಿಂದ ಸೇನಾಧಿಪತಿಯೇ ಪಲಾಯನ ಮಾಡಿದ ಮೇಲೆ ಸೈನಿಕರಿಗೆ ಅಲ್ಲೇನು ಕೆಲಸ ಎನ್ನುವ ಸ್ಥಿತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಎದುರಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕ್ಷೇತ್ರಾಂತರ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿ ಶಸ್ತ್ರ ತ್ಯಜಿಸಿದ ಸೈನಿಕರಂತಾಗಿದ್ದಾರೆ ಎಂದರು.
ಹೇಳಿ ಕೇಳಿ ಜೆಡಿಎಸ್ ಸಾಂಪ್ರದಾಯಿಕ ಮತದಾರರು ಕಾಂಗ್ರೆಸ್ ಪಕ್ಷದ ಬದ್ಧ ವೈರಿಗಳು. ತಮ್ಮ ಪಕ್ಷಕ್ಕೆ ಹಿನ್ನೆಡೆ ಖಚಿತವೆಂದು ಮನಗಂಡಿರುವ ಜೆಡಿಎಸ್‌ನ ಬಹುಪಾಲು ಮತದಾರರು ಬಿಜೆಪಿಯತ್ತ ವಾಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎದುರಾಳಿ: ಈ ಕ್ಷೇತ್ರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಅಭ್ಯರ್ಥಿಯೇ ಎದುರಾಳಿ. ಜೆಡಿಎಸ್ ನಮಗಿಲ್ಲಿ ಪ್ರತಿಸ್ಪರ್ಧಿಯೇ ಅಲ್ಲ. ಕಾಂಗ್ರೆಸ್ ವಿರೋಧಿ ಅಲೆ, ಡಿಕೆಎಸ್ ಸಹೋದರರ ದಬ್ಬಾಳಿಕೆ ರಾಜಕಾರಣದ ವಿರುದ್ಧ ಮಡುಗಟ್ಟಿರುವ ಸಿಟ್ಟು ಬಿಜೆಪಿಗೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಅಶೋಕ್ ತಿಳಿಸಿದರು.
ರಾಜ್ಯದಲ್ಲೂ ನರೇಂದ್ರ ಮೋದಿ ಅಲೆ ಎದ್ದಿದೆ. ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕೆನ್ನುವ ಮಾತು ಯುವ ಸಮುದಾಯದಲ್ಲಿ ಕೇಳಿ ಬರುತ್ತಿದೆ. ಇದು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲವಿಗೆ ಪೂರಕವಾಗಿದೆ ಎಂದು ಹೇಳಿದರು.
20ಕ್ಕೂ ಅಧಿಕ ಸ್ಥಾನ: ರಾಜ್ಯದಲ್ಲಿ ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೂ ಒಂದಾಗಿದೆ. ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದು, ವ್ಯಾಪಕ ಬೆಂಬಲ ದೊರೆತಿದೆ ಎಂದರು.