ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಂಕ್ರಾಮಿಕ ರೋಗ ಆರೋಗ್ಯಕ್ಕೆ ಮಾರಕ

Rashmi Kasaragodu
Updated On : 27 Mar 2014, 1:11 am

ಚನ್ನಪಟ್ಟಣ: ಸಾಂಕ್ರಾಮಿಕ ರೋಗಗಳು ಮಾನವನ ಆರೋಗ್ಯ ಮತ್ತು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಉಪನ್ಯಾಸಕ ಆನಂದರಾಮ ಮಧ್ಯಸ್ಥ ಅಭಿಪ್ರಾಯಪಟ್ಟರು.
 ತಾಲೂಕಿನ ಕೆಂಗಲ್ ಬಳಿಯ ಹೊಂಬೇಗೌಡ ಕೈಗಾರಿಕ ಮತ್ತು ತರಬೇತಿ ಸಂಸ್ಥೆಯ ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಹಾಗೂ ವಿಶ್ವ ಕ್ಷಯರೋಗ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಅವಧಿಯಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದಲ್ಲಿ ತಮ್ಮ ಮುಂದಿನ  ಭವಿಷ್ಯವನ್ನು ಉತ್ತಮಗೊಳಿಸಿ ಕೊಳ್ಳುವುದರ ಜೊತೆ ನೀರಿನ ಸದ್ಬಳಕೆಯ
ಅರಿವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕಿದೆ ಎಂದರು.
ಆರೋಗ್ಯ ಮತ್ತು ನೀರು ಒಂದೇ ನಾಣ್ಯದ ಎರಡು ಮಖಗಳಾಗಿದ್ದು, ಒಂದಕ್ಕೊಂದು ಸಂಬಂಧ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಸಾಕಷ್ಟು ರೋಗಗಳಿಗೆ ಎಡೆಮಾಡಿ ಕೊಡುತ್ತಿದ್ದು ವಿದ್ಯಾರ್ಥಿಗಳು ಓದಿನ ಜತೆಗೆ  ಇಂತಹ ವಿಚಾರಗಳನ್ನು ಅರಿತು ಕೊಳ್ಳಬೇಕಿದೆ ಎಂದರು.
ದೊಡ್ಡ ಸವಾಲು: ಮಂಡ್ಯ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಬಿ.ಟಿ. ಚಿಕ್ಕಪುಟ್ಟೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೀರು  ಅಮೂಲ್ಯ ಮತ್ತು ಅವಶ್ಯಕ ವಸ್ತುವಾಗುತ್ತಿದೆ. ನೀರಿನ ಸಂರಕ್ಷಣೆ ಬಗ್ಗೆ ನಾವು ಕೂಡಲೇ ಅರಿತು ಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
 ನೀರಿನ ಅಭಾವಕ್ಕೆ ಬಹುಮುಖ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರೀಕರಣ, ನಗರೀಕರಣ ಕಾರಣವಾಗಿದ್ದು ಪ್ರತಿ ಮನೆಯಲ್ಲೂ ಮಳೆ ನೀರು ಕುಯಿಲು ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸುವುದು ಹಾಗೂ ಭೂಮಿಯ ಮೇಲೆ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಇಂಗಿಸುವಂತಹ ಕೆಲಸ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಭಾವಿಸಿ ಕ್ರಮಕೈಗೊಂಡಾಗ ನೀರಿನ ಬವಣೆಯನ್ನು ಸರಿದೂಗಿಸಬಹುದಾಗಿದೆ
ಎಂದರು.
ಪರೀಕ್ಷೆಗೆ ಮುಂದಾಗಿ: ಕ್ಷಯರೋಗ ಕುರಿತು ಮಾತನಾಡಿದ ಆರೋಗ್ಯ ಇಲಾಖೆಯ ಡಿ.ಪುಟ್ಟಸ್ವಾಮಿಗೌಡ,  ಯಾವುದೇ ವ್ಯಕ್ತಿಗೆ ಎರಡು ವಾರಗಳ ನಿರಂತರ ಕೆಮ್ಮು, ಎದೆ ನೋವು, ಕಫದಲ್ಲಿ ರಕ್ತ, ಸಂಜೆ ವೇಳೆ ಚಳಿಜ್ವರ, ಊಟ ಸೇರದಿರುವಿಕೆ, ದೇಹದ ತೂಕ ಕಡಿಮೆಯಾಗುವಿಕೆಗಳು ಕ್ಷಯರೋಗದ ಸಾಮಾನ್ಯ ಲಕ್ಷಣಗಳಾಗಿದ್ದು ಇಂತಹ ವ್ಯಕ್ತಿಗಳು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕಫ ಪರೀಕ್ಷೆಗೆ ಮುಂದಾಗಬೇಕಿದೆ ಎಂದರು.
ರೋಗ ದೃಢಪಟ್ಟಲ್ಲಿ ಉಚಿತವಾಗಿ ರೋಗ ಸಂಪೂರ್ಣ ವಾಸಿಯಾಗಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು ರೋಗಿಗಳು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿ ಹೆಚ್ಚು ಹೆಚ್ಚು ಹಸಿರು ಸೊಪ್ಪು ತರಕಾರಿಗಳುಳ್ಳ ಸಮತೋಲನ ಆಹಾರ ಪದ್ಧತಿಯಿಂದ ಈ ರೋಗದಿಂದ ದೂರವಿರಬಹುದೆಂದರು.
ಗೀತಗಾಯನ: ಗಾಯಕ ಎಚ್.ಶಿವರಾಮಯ್ಯ ಗೀತಗಾಯನ ನಡೆಸಿಕೊಟ್ಟರು.
 ಎನ್.ಎಸ್. ಎಸ್. ಶಿಬಿರಾಧಿಕಾರಿ ಮರಿದೇವರು, ಉಪನ್ಯಾಸಕರಾದ ಶಿಖರೇಶ್, ಶಂಕರ್, ಪುಟ್ಟ ರೇಣುಕಾ ರಾಧ್ಯ, ದಿನೇಶ್, ಕಾಂತರಾಜು, ವಂದಾರಗುಪ್ಪೆ ಚಂದ್ರು, ಅನಿತಾ, ರಜನಿ, ಸುಧಾ, ರಾಜಮ್ಮ ಇದ್ದರು. ಉಪನ್ಯಾಸಕ ಶಿಖರೇಶ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement