ಕಲಾವಿದರಿಗೆ ನೀಡುವ ಮಾಸಾಶನ ಹೆಚ್ಚಿಸಲಿ
ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಮಾ.27
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕಲಾವಿದರ ಸಂಘದ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಡಿಕ್ರಾಸ್ ರಸ್ತೆಯಲ್ಲಿರುವ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಸರ್ಕಾರ 3 ಸಾವಿರಕ್ಕೆ ಹೆಚ್ಚಿಸಬೇಕು. ಸಾಂಸ್ಕೃತಿಕ ಚಟುವಟಿಕೆಗಳನ್ನು ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು. ರಂಗಭೂಮಿ ದಿನಾಚರಣೆಯನ್ನು ವಿಶ್ವವ್ಯಾಪಿಯಾಗಿ ಆಚರಿಸುತ್ತಿದ್ದು ರಂಗಚಟುವಟಿಕೆಗಳಿಗೆ ಈ ಮೂಲಕ ಉತ್ತೇಜನ ನೀಡುವ ಕೆಲಸ ಆಗಬೇಕು. ದೊಡ್ಡಬಳ್ಳಾಪುರ ಮೂಲಭೂತವಾಗಿ ರಂಗ ಚಟುವಟಿಕೆಗಳಿಗೆ ನಿರಂತರ ಆಸರೆ ಒದಗಿಸಿಕೊಂಡು ಬರುತ್ತಿರುವ ನೆಲವಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ರಂಗ ಚಟುವಟಿಕೆಗಳು ನಡೆಯಲು ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಸಂಘಟನೆಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎಸ್.ರಾಮಮೂರ್ತಿ, ತಾಲೂಕು ಕಸಾಪ ಅಧ್ಯಕ್ಷ ಡಿ. ಶ್ರೀಕಾಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಕನ್ನಡಪರ ಹೋರಾಟಗಾರ ಪ್ರಭಾಕರ ರೆಡ್ಡಿ, ಸಾಹಿತಿ ಯಶವಂತ ಚಿತ್ತಾಲ, ನೀರಾವರಿ ತಜ್ಞ ಡಾ.ಪರಮಶಿವಯ್ಯ, ಚಿತ್ರನಟ ಸಿ.ಆರ್.ಸಿಂಹ, ಸಂಗೀತಜ್ಞ ಆರ್.ಕೆ.ಶ್ರೀಕಂಠನ್, ದೊಡ್ಡಬಳ್ಳಾಪುರದ ಛಾಯಾಗ್ರಾಹಕ ಕೆ.ಎನ್.ಎಂ.ರಾಮು, ಕಲಾವಿದ ತೂಬಗೆರೆ ಮಾರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ, ತಾ.ಕಸಾಪ ಕಾರ್ಯದರ್ಶಿ ಪ್ರಕಾಶ್, ಜ್ಯೋತಿಕುಮಾರ್, ಸಂಚಾಲಕ ಪ್ರಕಾಶ್ರಾವ್ ಇತರರು ಹಾಜರಿದ್ದರು.ತಾಲೂಕಿನ ಕಲಾವಿದರುಗಳಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.