ದೋಸೆ ಹಾಕ್ತಾ ನಿಂತ ಜಿಪಂ ಸಿಇಒ ವೆಂಕಟೇಶ್: ಮತದಾನ ಜಾಗೃತಿಗೆ ಈ ಕ್ರಮ
ವಿಶೇಷ ವರದಿ
ರಾಮನಗರ: ಇವ್ರು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ವಿ.ವೆಂಕಟೇಶ್. ಐಎಎಸ್ ಅಧಿಕಾರಿ ಆಗಿರೋ ಅವರು ಸೂಟು, ಬೂಟು ಹಾಕ್ಕೊಂಡು ಬಸ್ಸ್ಟ್ಯಾಂಡ್ನಲ್ಲಿ ದೋಸೆ ಹಾಕ್ತಾ ನಿಂತಿದ್ರು...
ಇದೇನಪ್ಪಾ, ಐಎಎಸ್ ಅಧಿಕಾರಿಗೆ ಎಂತಹ ಗತಿ ಬಂತು ಎಂದು ಹುಬ್ಬೇರಿಸಬೇಡಿ. ಇದು, ಅಚ್ಚರಿ ಆದ್ರೂ ಸತ್ಯ. ಅವರು ಮಾಡಿದ ಆ ಕೆಲಸದ ಉದ್ದೇಶ ಮತದಾನ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದ್ದಷ್ಟೇ. ಒಂದೆಡೆ ಚುನಾವಣಾ ಅಖಾಡಕ್ಕೆ ಇಳಿದ ರಾಜಕಾರಣಿಗಳು ಗದ್ದುಗೆಗಾಗಿ ಗುದ್ದಾಡಿಕೊಂಡೇ ಮತಬೇಟೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮತದಾನ ಕುರಿತು ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಅಧಿಕಾರಿಗಳ ತಂಡ ಹೀಗೆ ಭಿನ್ನ ಕಾರ್ಯಕ್ರಮಗಳಲ್ಲಿ ತೊಡಗಿದೆ.
ಅಕ್ಷರ ದೋಸಾ: ಡಾ.ವೆಂಕಟೇಶ್ ಮತದಾನ ಕುರಿತು ಜಾಗೃತಿ ಮೂಡಿಸುವ ಸ್ವೀಪ್ ಸಮಿತಿ ಅಧ್ಯಕ್ಷರೂ ಹೌದು. ಸಮಿತಿ ಮೂಲಕ ಮತದಾನ ಜಾಗೃತಿಗಾಗಿ ರಂಗೋಲಿ, ಸಾಕ್ಷ್ಯಚಿತ್ರ ಪ್ರದರ್ಶನ, ಕರಪತ್ರ ಹಂಚಿಕೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಅವರು ರೂಪಿಸಿದ್ದಾರೆ. ಮತದಾನ ಜಾಗೃತಿ ಅಭಿಯಾನದಲ್ಲಿ ತೀರಾ ವಿಶಿಷ್ಟ ಎನ್ನುವಂತೆ ಅಕ್ಷರ ದೋಸಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರು ಬಸ್ ನಿಲ್ದಾಣದಲ್ಲಿ ಅಕ್ಷರದ ಮೂಲಕ ದೋಸೆ ಹಾಕಿ ತಾವೇ ಅದಕ್ಕೆ ಚಾಲನೆ ನೀಡಿದರು. ಅನೇಕರು ನನ್ನದೊಂದು ಮತದಿಂದ ಏನಾಗುತ್ತೆ ಎಂದು ಮತದಾನದ ಬಗ್ಗೆ ನಿರುತ್ಸಾಹ ತೋರಿಕೊಂಡೇ ಬಂದಿದ್ದಾರೆ. ಅಂತಹವರಿಗೆ ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಡುವುದಕ್ಕೆ ಸ್ವೀಪ್ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮದ ವಿನೂತನ ಪ್ರಯೋಗದಲ್ಲಿ ಅಕ್ಷರ ದೋಸಾ ಕೂಡ ಒಂದಾಗಿದೆ. ನನ್ನ ಮತ ನನ್ನ ಹಕ್ಕು, ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವ ಭದ್ರಪಡಿಸಿ ಹೀಗೆ ನಾನಾ ಘೋಷಣೆಗಳನ್ನು ದೋಸೆಯ ರೂಪದಲ್ಲಿ ಮೂಡಿಸಿ ಉಚಿತವಾಗಿ ಆ ದೋಸೆಗಳನ್ನು ಹಂಚುತ್ತಾ ಪ್ರೇರೇಪಿಸುವ ಕೆಲಸ ಬಸ್ ನಿಲ್ದಾಣದಲ್ಲಿ ಸಾಕಷ್ಟು ಹೊತ್ತು ನಡೆದು, ಗಮನ ಸೆಳೆಯಿತು.
ತಪ್ಪದೇ ಮತ ಹಾಕಿ: ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವೆಂಕಟೇಶ್, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುವತ್ವನ್ನು ಎತ್ತಿ ಹಿಡಿಯಬೇಕು. ಪ್ರತಿಯೊಂದು ಮತವೂ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಯೋಜನಾ ನಿರ್ದೇಶಕ ಎಸ್.ವೈ.ಬಸವರಾಜಪ್ಪ, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಮಂಜು ನಾಯಕ್, ವಾರ್ತಾಧಿಕಾರಿ ಹಮೀದ್ಖಾನ್, ಅಕ್ಷರ ದಾಸೋಹ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.