ಬಾಲಕಿ ಮೇಲೆ ಅತ್ಯಾಚಾರ ಯತ್ನ: ಕಾಮುಕನಿಗೆ ಏಟು
ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಮಾ.27
ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನೊಬ್ಬನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.
ಇಲ್ಲಿನ ಶ್ರೀನಗರ ನಿವಾಸಿ ಆಟೋ ಚಾಲಕ ಚಂದ್ರಕುಮಾರ ಧರ್ಮದೇಟು ತಿಂದ ಕಿಡಿಗೇಡಿ. ಈತ ಬುಧವಾರ ಸಂಜೆ 4 ಗಂಟೆ ವೇಳೆಯಲ್ಲಿ ಟ್ಯೂಷನ್ಗೆ ಹೋಗುತ್ತಿದ್ದ 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದ್ದು, ರೇಲ್ವೆ ನಿಲ್ದಾಣ ಸಮೀಪದ ಕೆಂಪೇಗೌಡ ಬಡಾವಣೆಯಲ್ಲಿ ಘಟನೆ ನಡೆದಿದೆ. ಟ್ಯೂಷನ್ಗೆ ಹೋಗುವ ಮಾರ್ಗ ಮಧ್ಯೆ ಆಕೆಯನ್ನು ಆಟೋದಲ್ಲಿ ಹತ್ತಿಸಿಕೊಂಡು ಹೋಗಿ ನೀಲಗಿರಿ ತೋಪಿಗೆ ಕರೆದೊಯ್ದು, ದುಷ್ಕೃತ್ಯ ಎಸಗಲು ಯತ್ನಿಸಿದ್ದಾನೆ. ಆ ವೇಳೆ ಬಾಲಕಿ ಕಿರುಚಾಡಿದಾಗ ಸ್ಥಳದಲ್ಲೇ ಇದ್ದ ಕೆಲವರು ಚಂದ್ರಕುಮಾರನನ್ನು ವಿಚಾರಿಸಿದ್ದರು. ಆದರೆ ಬಾಲಕಿ ಪರಿಚಿತಳು. ಪೋಷಕರ ಬಳಿಗೆ ಆಕೆಯನ್ನು ಕರೆದೊಯ್ಯುತ್ತಿದ್ದೆ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಬಾಲಕಿ ಈ ಮಾತುಗಳನ್ನು ಅಲ್ಲಗೆಳೆದಿದ್ದಾಳೆ. ಇದರಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ಆರೋಪಿಯ ನಿಜಬಣ್ಣ ಬಯಲಾಗಿದ್ದು, ಆತನನ್ನು ಥಳಿಸಿದ್ದಾರೆ.
ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.